ಮನೆ ಸುದ್ದಿ ಮಯೂರನ ನಂತರದ ಕದಂಬ ಸಾಮ್ರಾಜ್ಯ

ಮಯೂರನ ನಂತರದ ಕದಂಬ ಸಾಮ್ರಾಜ್ಯ

ಮೂಲಕ Arivu Technologies
0 ಕಾಮೆಂಟ್‌ಗಳು 10 ವೀಕ್ಷಣೆಗಳು
A+A-
ಮರುಹೊಂದಿಸಿ

ಕನ್ನಡಿಗರ ಮೊದಲ ರಾಜಧಾನಿ ಬನವಾಸಿ. ಈ ಬನವಾಸಿಯ ಕುರಿತು ಇತಿಹಾಸದ ಪುಟಗಳಲ್ಲಿ ಏನಿದೆ ಎಂದು ನೋಡುವುದಕ್ಕೆ ಹೋದವರಿಗೆಲ್ಲಾ ಮೊದಲು ಸಿಗುವುದೇ ಪಂಪನ ‘ಮೇಣ್ ಕೋಗಿಲೆಯಾಗಿ, ಮರಿದುಂಬಿಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್’ ಎನ್ನುವ ಸಾಲು. ನಾಲ್ಕನೇ ಶತಮಾನದಿಂದ ಆರನೇ ಶತಮಾನದ ವರೆಗೆ ಉತ್ತುಂಗದಲ್ಲಿದ್ದ ಕದಂಬ ಸಾಮ್ರಾಜ್ಯದ ರಾಜಧಾನಿಯಾಗಿದ್ದು ಬನವಾಸಿ, ಆದರೆ ಪಂಪ ಅದನ್ನು ಮೇಲಿನಂತೆ ಹಾಡಿಹೊಗಳಿದ್ದು ಹತ್ತನೇ ಶತಮಾನದಲ್ಲಿ. ಕದಂಬರ ಕಾಲ ಮುಗಿದು ಮೂರ್ನಾಲ್ಕು ಶತಮಾನದ ನಂತರವೂ ಪಂಪ ಬನವಾಸಿಯನ್ನು ಹಾಡಿ ಹೊಗಳಿದನೆಂದರೆ ಬನವಾಸಿಯ ಆ ವೈಭೋಗ ಹೇಗಿರಬೇಕು? ಅದನ್ನಾಳಿದ ಕದಂಬ ಅರಸರು ಬನವಾಸಿಯ ಅಭಿವೃದ್ಧಿಗಳಿಗೆ ಎಂತೆಂತಹ ಕೊಡುಗೆಗಳನ್ನು ಕೊಟ್ಟಿರಬಹುದು ಎಂಬ ಸಣ್ಣ ಪ್ರಶ್ನಾತ್ಮಕ ಯೋಚನೆ ನಮ್ಮಲ್ಲಿ ಮೂಡುತ್ತದೆ. ಮಯೂರನ ಕಾಲದಲ್ಲೇ ಬಲಿಷ್ಠ ಸಾಮ್ರಾಜ್ಯವಾಗಿ ಹೊರಹೊಮ್ಮಿದ್ದ ಕದಂಬ ಸಾಮ್ರಾಜ್ಯವನ್ನು ಆತ ಆಳಿದ್ದು ಕೇವಲ ಇಪ್ಪತ್ತು ವರ್ಷಗಳ ಕಾಲವಷ್ಟೇ. ಅದಕ್ಕೆ ಕದಂಬ ಕುಲದ ಮೂಲ ಪುರುಷ ಮಯೂರ ವರ್ಮನ ನಂತರ ಕದಂಬ ಸಾಮ್ರಾಜ್ಯದ ಆಗು ಹೋಗುಗಳೇನು ಎಂದು ತಿಳಿದುಕೊಳ್ಳುವುದು ಅವಶ್ಯವಾಗುತ್ತದೆ. ಮಾನವ್ಯ ಗೋತ್ರ, ಹರಿತಿ ಪುತ್ರರು ಎಂದು ತಮ್ಮನ್ನು ತಾವು ಕರೆದುಕೊಂಡು ಸಿಂಹವನ್ನು ತಮ್ಮ ಲಾಂಛನವನ್ನಾಗಿ ಹೊಂದಿದ್ದವರು ಕದಂಬರು. ಕದಂಬರ ಮೂಲಪುರುಷ ಮಯೂರ ಸುಭದ್ರವಾದ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರೂ ಆತ ಅದನ್ನು ಆಳ್ವಿಕೆ ಮಾಡಿದ್ದು ಮಾತ್ರ ಎರಡು ದಶಕಗಳ ಕಾಲವಷ್ಟೇ, ಅದರಲ್ಲೂ ಬಹುಪಾಲು ಸಮಯವನ್ನು ರಾಜ್ಯ ವಿಸ್ತರಣೆಯಲ್ಲೇ ಕಳೆದ ಮಯೂರ ತನ್ನ ಅಧಿಕಾರವಧಿಯಲ್ಲೇ ತನ್ನ ಮಗನಿಗೆ ಅಧಿಕಾರ ಹಸ್ತಾಂತರ ಮಾಡಿಲ್ಲವೆಂದು ತೋರುತ್ತದೆ. ಬಹುಶಃ ಅದೇ ಕಾರಣಕ್ಕೆ ಮಯೂರನ ಮಗ ಕಂಗವರ್ಮ ಸಿಂಹಾಸನವೇರಿದಾಗ ಕದಂಬರ ಅನೇಕ ಸಾಮಂತರು ಬಂಡಾಯವೇಳುತ್ತಾರೆ. ಕದಂಬ ಸಾಮ್ರಾಜ್ಯದ ಆಂತರಿಕ ಲೋಪಗಳನ್ನು ಕಾಲಕಾಲಕ್ಕೆ ಗಮನಿಸುತ್ತಿದ್ದ ವಾಕಟಕರು ಕೂಡ ಅದೇ ಸಮಯಕ್ಕೆ ಉತ್ತರ ಭಾಗದಿಂದ ಕದಂಬ ಸಾಮ್ರಾಜ್ಯದ ಮೇಲೆರಗುತ್ತಾರೆ. ಒಂದೊಂದಕ್ಕೂ ಪರಿಹಾರ ಕಂಡುಕೊಳ್ಳಲು ಮೊದಲಾಗುವ ಕಂಗವರ್ಮ ಮೊದಲಿಗೆ ತನ್ನ ರಾಜ್ಯದೊಳಗೆ ಸಾಮಂತರಿಂದ ಉಂಟಾದ ಬಂಡಾಯದ ಬೇಗುದಿಯನ್ನು ಶಮನ ಮಾಡುವತ್ತ ಗಮನ ಹರಿಸುತ್ತಾನೆ, ಅದೇ ಕಾರಣದಿಂದ ಆತ ವಾಕಟಕರ ದಾಳಿಗೆ ತನ್ನ ಸಾಮ್ರಾಜ್ಯದ ಉತ್ತರ ಭಾಗದ ಕೆಲವು ಪ್ರದೇಶಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಮತ್ತೆ ಆತ ತನ್ನ ಜೀವಮಾನದಲ್ಲಿ ಕಳೆದುಕೊಂಡ ಪ್ರದೇಶಗಳನ್ನು ಹಿಂದಿರುಗಿ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಮುಂದೆ ಸಿಂಹಾಸನವೇರಿದ ಕಂಗವರ್ಮನ ಮಗ ಭಗೀರಥ ಮಹಾನ್ ಪರಾಕ್ರಮಿ ಹಾಗು ಶಕ್ತಿಶಾಲಿ ನಾಯಕನಾಗಿದ್ದ. ಆತ ಸಿಂಹಾಸನವೇರಿದ ತಕ್ಷಣವೇ ಕೈಗೊಳ್ಳುವ ಯೋಜನೆ ತನ್ನ ತಂದೆ ಕಳೆದುಕೊಂಡ ಪ್ರದೇಶಗಳನ್ನು ಮರಳಿ ಗಳಿಸಿಕೊಳ್ಳುವುದು. ವಾಕಟಕರಿಗೆ ಇದರ ಸುಳಿವು ದೊರೆತು ಅವರು ಭಗೀರಥನನ್ನು ಮಣಿಸಲು ಗುಪ್ತರ ಜೊತೆ ಮೈತ್ರಿ ಮಾಡಿಕೊಂಡು ಒಟ್ಟಾಗಿ ಕದಂಬ ಸಾಮ್ರಾಜ್ಯದ ಮೇಲೆ ಎರಗುತ್ತಾರೆ. ರಣಭಯಂಕರನಂತೆ ಯುದ್ಧದಲ್ಲಿ ಪಾಲ್ಗೊಂಡ ಭಗೀರಥ ವಾಕಟಕರ ಹಾಗು ಗುಪ್ತರ ಸೈನ್ಯವನ್ನು ಸೋಲಿಸಿ ಹಿಂದಕ್ಕೆ ಅಟ್ಟುವುದಲ್ಲದೆ ತನ್ನ ತಂದೆ ಕಂಗವರ್ಮ ಕಳೆದುಕೊಂಡಿದ್ದ ಕುಂತಳವನ್ನೂ ತನ್ನ ಕೈವಶ ಮಾಡಿಕೊಳ್ಳುತ್ತಾನೆ. ಗುಪ್ತರನ್ನು ಸೋಲಿಸಿದ್ದೇ ತಡ ಭಗೀರಥನ ಕೀರ್ತಿ-ಪ್ರತಿಷ್ಠೆಯು ಭಾರತದಾದ್ಯಂತ ಹರಡಲು ಆರಂಭವಾಗುತ್ತದೆ. ಮುಂದೆ ಭಗೀರಥನ ಕಾಲಾನಂತರ ಕದಂಬ ಸಾಮ್ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವುದು ‘ಕದಂಬ ಕುಲಶೀರೋಮಣಿ’ ಎಂದೇ ಬಿರುದಾಂಕಿತನಾಗಿದ್ದ ಕಾಕುಸ್ಥವರ್ಮ. ಈತ ಭಗೀರಥನಿಗಿಂತಲೂ ಬಲಶಾಲಿ ಹಾಗು ಬುದ್ಧಿಶಾಲಿಯಾಗಿದ್ದವನು. ಈತನ ಕಾಲದಲ್ಲಿ ನಡೆದ ಯುದ್ಧಗಳ ಬಗ್ಗೆ ಮಾಹಿತಿಗಳು ದೊರೆಯದಿದ್ದರೂ ಈತನ ರಾಜಕೀಯ ಮುತ್ಸದ್ದಿತನ ಇತಿಹಾಸಕಾರರಲ್ಲಿ ಪ್ರಶಂಸೆಗೊಳಪಟ್ಟಿದೆ. ಸದಾ ವಾಕಟಕರೊಂದಿಗೆ ಹಾಗು ಗುಪ್ತರೊಂದಿಗೆ ಯುದ್ಧ ಮಾಡುತ್ತಿದ್ದ ಕದಂಬರು ಅದಕ್ಕೆಂತಲೇ ಅಪಾರ ಧನ-ಕನಕಗಳನ್ನೂ ಖರ್ಚು ಮಾಡುತ್ತಿದ್ದರು. ಇದಕ್ಕೆ ಶಾಶ್ವತ ಪರಿಹಾರವೊಂದನ್ನು ಕಂಡುಹಿಡಿದ ಕಾಕುಸ್ಥವರ್ಮ ಗುಪ್ತರು ಹಾಗು ವಾಕಟಕರೊಂದಿಗೆ ವೈವಾಹಿಕ ಸಂಬಂಧಗಳನ್ನು ಏರ್ಪಡಿಸಿಕೊಂಡು ವೈರತ್ವವನ್ನು ಸಂಬಂಧಕ್ಕೆ ತಿರುಗಿಸಿದ್ದ. ಅವರಷ್ಟೇ ಅಲ್ಲದೆ ತನ್ನ ಸಾಮ್ರಾಜ್ಯದ ನೆರೆಯ ಸಾಮ್ರಾಜ್ಯಗಳಾದ ಆಳುಪ, ಗಂಗರ ವಂಶಗಳಿಗೂ ತನ್ನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವ ಮೂಲಕ ತನ್ನ ಸುತ್ತಲಿನ ಸಾಮ್ರಾಜ್ಯಗಳನ್ನು ತನ್ನ ಸಂಬಂಧಿ ಸಾಮ್ರಾಜ್ಯಗಳನ್ನಾಗಿ ಪರಿವರ್ತಿಸಿಕೊಂಡಿದ್ದ. ಇನ್ನು ಕನ್ನಡಿಗರು ತೀರಾ ಇತ್ತೀಚಿನವರೆಗೂ ನಂಬಿದ್ದ ಕನ್ನಡದ ಮೊದಲ ಶಾಸನ ‘ಹಲ್ಮಿಡಿ ಶಾಸನ’ವನ್ನು ಬರೆಸಿದವನು ಕೂಡ ಇದೇ ಕಾಕುಸ್ಥವರ್ಮ. ರಾಜಕೀಯವಾಗಿ ಮುತ್ಸದ್ದಿಯಾಗಿದ್ದರೂ ಕಾಕುಸ್ಥವರ್ಮನ ನಂತರ ಕದಂಬ ಸಾಮ್ರಾಜ್ಯ ತನ್ನ ವರ್ಚಸ್ಸು ಕಳೆದುಕೊಳ್ಳುತ್ತಾ ಸಾಗುತ್ತದೆ. ಅದಕ್ಕೆ ಕಾರಣ ಕಾಕುಸ್ಥವರ್ಮನಿಗೆ ಗಂಡು ಮಕ್ಕಳು ಇಲ್ಲದ್ದು, ಅದರಿಂದಲೇ ಕದಂಬ ಸಾಮ್ರಾಜ್ಯ ಬನವಾಸಿ, ಉಚ್ಛಂಗಿ ಹಾಗು ಶ್ರೀಪರ್ವತ ಶಾಖೆಗಳಾಗಿ ಒಡೆದುಹೋಗುತ್ತದೆ. ಕದಂಬ ಸಾಮ್ರಾಜ್ಯದಲ್ಲಿ ಇಂತಹ ಅಯೋಮಯ ಪರಿಸ್ಥಿತಿ ನಿರ್ಮಾಣವಾದ ಕೂಡಲೇ ಅದರ ಲಾಭ ಪಡೆದುಕೊಳ್ಳಲು ಮೊದಲಾದ ಬಾದಾಮಿಯ ಚಾಲುಕ್ಯರು ಹಾಗು ಪಲ್ಲವರು ಕ್ರಮವಾಗಿ ಉತ್ತರ ಹಾಗು ದಕ್ಷಿಣದಿಂದ ಕದಂಬ ಸಾಮ್ರಾಜ್ಯದ ಮೇಲೆ ದಾಳಿಗಳನ್ನು ಮಾಡಿ ಕದಂಬರನ್ನು ಕ್ರಿಶ ೫೪೦ರಲ್ಲಿ ಅಧಿಕಾರದಿಂದ ಕೆಳಗಿಳಿಸುವಲ್ಲಿ ಸಫಲರಾಗುತ್ತಾರೆ. ಬಾದಾಮಿ ಚಾಲುಕ್ಯರ ಅರಸ ಒಂದನೇ ಪುಲಿಕೇಶಿ ಕದಂಬರ ಬಹುತೇಕ ಪ್ರದೇಶಗಳನ್ನು ತನ್ನ ಸಾಮ್ರಾಜ್ಯದಲ್ಲಿ ವಿಲೀನ ಮಾಡುತ್ತಾನೆ. ಹೀಗೆ ಕ್ರಿಶ ೩೪೫ರಿಂದ ೫೪೦ರವರೆಗೆ ಇಂದಿನ ಕರ್ನಾಟಕದ ಬಹುತೇಕ ಭಾಗಗಳಷ್ಟೇ ಅಲ್ಲದೆ ನೆರೆಯ ಗೋವಾ, ಮಹಾರಾಷ್ಟ್ರದ ದಕ್ಷಿಣ ಭಾಗಗಳನ್ನು ಆಳಿದ ಕದಂಬರು ಬಾದಾಮಿ ಚಾಲುಕ್ಯರಿಗೂ, ಕಲ್ಯಾಣಿ ಚಾಲುಕ್ಯರಿಗೂ, ರಾಷ್ಟ್ರಕೂಟರಿಗೂ ಸಾಮಂತರಾಗಿ ಕರ್ನಾಟಕದ ಹಲಸಿ, ಹಾನಗಲ್, ಗೋವಾ, ಕೇರಳದ ವಯನಾಡು, ಒಡಿಶಾದ ಜಯಂತಿಪುರಗಳಲ್ಲಿ ನಿಂತು ಆಡಳಿತ ಮಾಡಿದ್ದು ಕಂಡುಬರುತ್ತದೆ. ಮುಂದೆ ಹದಿನಾಲ್ಕನೇ ಶತಮಾನದಲ್ಲಿ ಕರ್ನಾಟಕ ಸಾಮ್ರಾಜ್ಯ ಪ್ರವರ್ಧಮಾನಕ್ಕೆ ಬರುವ ಹೊತ್ತಿಗೆ ಈ ವಂಶ ಕೊನೆಯಾಗಿದ್ದಾಗಿ ಇತಿಹಾಸಕಾರರು ಗುರುತಿಸಿದ್ದಾರೆ. ಇದು ಕನ್ನಡ ನಾಡನ್ನು ಒಗ್ಗೂಡಿಸಿ ಕನ್ನಡ ಭಾಷೆಗೆ ಆಡಳಿತ ಭಾಷೆಯ ಸ್ಥಾನ ಮಾನ ನೀಡಿ ಆಳಿದ ಕನ್ನಡದ ಮೊದಲ ಸಾಮ್ರಾಜ್ಯದ ಕಥೆ.

ನಿಮಗೂ ಇಷ್ಟವಾಗಬಹುದು

ಕಾಮೆಂಟ್ ಬಿಡಿ

ಕನ್ನಡದ ಕಣ್ಮಣಿಯಾಗಲು ಚಂದಾದಾರರಾಗಿ

ಕನ್ನಡದ ಇತಿಹಾಸ, ಸಂಸ್ಕೃತಿ, ಮತ್ತು ಪರಂಪರೆಯನ್ನು ಕಾದುಹಿಡಿಯಲು, ಹಾಗೂ ಹೊಸ ಟೀಶರ್ಟ್ ಡಿಸೈನ್‌ಗಳು ಮತ್ತು ವಿಶೇಷ ಆಫರ್‌ಗಳ ಮಾಹಿತಿಗಾಗಿ ಚಂದಾದಾರರಾಗಿ

ಫೋನ್ : +91 9380200155

ಇಮೇಲ್ : karnatabala@gmail.com
ವಿಳಾಸ: #೧೦೩೮, ೭ನೇ ಹಂತ, ಬನಶಂಕರಿ ೬ನೇ ಹಂತ ಬಡಾವಣೆ, ಬೆಂಗಳೂರು ದಕ್ಷಿಣ, ಬೆಂಗಳೂರು- ೫೬೦೦೬೦

@2025 – All Right Reserved. Designed and Developed by Catalyst Digisolutions
Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00