ಚಾಲುಕ್ಯ ಸಾಮ್ರಾಜ್ಯದ ಉಗಮ

ಬಾದಾಮಿ ಚಾಲುಕ್ಯರು ಕರ್ನಾಟಕದ ಇತಿಹಾಸದಲ್ಲಿ ಅಜರಾಮರರಾಗಿ ಉಳಿಯುವಂತಹವರು. ತಮ್ಮ ಶಕ್ತಿ ಸಾಮರ್ಥ್ಯದಿಂದಲೂ, ಪ್ರಜಾಪರ ಕೈಂಕರ್ಯಗಳಿಂದಲೂ, ಕಲಾ ನೈಪುಣ್ಯತೆಯಿಂದಲೂ ಹೆಸರುವಾಸಿಯಾದ ಈ ಚಾಲುಕ್ಯರು ಭರತಭೂಮಿಯಷ್ಟೇ ಅಲ್ಲದೆ ನೆರೆಯ ಇರಾನ್, ಶ್ರೀಲಂಕಾ, ಕಾಂಬೋಡಿಯಾದವರೆಗೂ ಕನ್ನಡಿಗರ ಪ್ರತಿಷ್ಠೆಯನ್ನು ಮೆರೆದು ಭಾರತ ದೇಶದ ಇತಿಹಾಸದಲ್ಲಿ ಅತ್ಯುನ್ನತ ಸ್ಥಾನ ಪಡೆದುದಷ್ಟೇ ಅಲ್ಲದೆ ಕಲೆ, ವಾಸ್ತುಶಿಲ್ಪ, ವಿಜ್ಞಾನ, ಭಾಷೆಗೆ ಅವರು ಕೊಟ್ಟ ಕಾಣಿಕೆಗಳು ಇಂದಿಗೂ ಅಚ್ಚಳಿಯದೆ ಉಳಿದುಕೊಳ್ಳುವಂತೆ ಆಗಿದೆ. ಕದಂಬರ ಮಯೂರವರ್ಮನಿಂದ ಆರಂಭವಾದ ಕನ್ನಡ ಭಾಷಿಕರ ಆಡಳಿತ ಮುಂದೆ ಬಾದಾಮಿ ಚಾಲುಕ್ಯರ ಕಾಲದಲ್ಲಿ ಭರತಖಂಡದಲ್ಲೆಲ್ಲಾ ತನ್ನ ಪ್ರಭಾವವನ್ನು ವಿಸ್ತರಿಸಿತ್ತು. ಕನ್ನಡ ನಾಡಿನ ಅಮರ ಶಿಲ್ಪಿಗಳ ಕೈಚಳಕದಿಂದ ಸೃಷ್ಟಿಯಾದ, ವಿಶ್ವವೇ ನಿಬ್ಬೆರಗಾಗಿ ನೋಡುವ ಕನ್ನಡನಾಡಿನ ವೈಭವಗಳ ಕುರುಹಾದ ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪವನ್ನು ಬೆರಗಾಗದವರೇ ವಿರಳ. ಕರ್ನಾಟಕದ ಇತಿಹಾಸವನ್ನು ತಿಳಿಯಹೊರಟ ಯಾರಾದರೂ ಸರಿಯೇ ಬಾದಾಮಿ ಚಾಲುಕ್ಯರ ಕುರಿತು ಆಮೂಲಾಗ್ರವಾಗಿ ತಿಳಿದುಕೊಳ್ಳುವುದು ಅತ್ಯವಶ್ಯಕ, ಇಲ್ಲವಾದಲ್ಲಿ ಕರ್ನಾಟಕದ ಇತಿಹಾಸವೇ ಅಪೂರ್ಣ. ಬಾದಾಮಿ ಚಾಲುಕ್ಯರು ಎನ್ನುವ ಹೆಸರು ಕೇಳುತ್ತಿದ್ದ ಹಾಗೆ ಚಾಲುಕ್ಯರು ಎಂದರೇನು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಅದಕ್ಕೂ ಮುನ್ನ ಬಾದಾಮಿ ಸ್ಥಳದ ಐತಿಹ್ಯವನ್ನು ಗಮನಿಸುವುದೂ ಸೂಕ್ತವೇ. ಬಾದಾಮಿಯ ಪುರಾತನ ಹೆಸರು ವಾತಾಪಿ. ಪುರಾಣಗಳ ಪ್ರಕಾರ ಇಲ್ಲಿ ವಾತಾಪಿ ಹಾಗೂ ಇಲ್ವಳ ಎಂಬ ಇಬ್ಬರು ರಾಕ್ಷಸರು ವಾಸವಾಗಿದ್ದರಂತೆ. ಅವರ ಅತಿಮಾನುಷ ಶಕ್ತಿಯ ಉಪಟಳದಿಂದ ನೊಂದಿದ್ದ ಜನ ಒಮ್ಮೆ ಅತ್ತ ಧಾವಿಸಿದ ಅಗಸ್ತ್ಯ ಮುನಿಗಳನ್ನು ಬೇಡಿಕೊಂಡಾಗ ಅವರು ಈ ರಾಕ್ಷಸರನ್ನು ಸಂಹಾರ ಮಾಡುವುದಕ್ಕೆ ನಿರ್ಧಾರ ಮಾಡಿಕೊಂಡರಂತೆ. ಇದನ್ನು ತಿಳಿದು ರಾಕ್ಷಸರು ಅಗಸ್ತ್ಯರಿಗಿಂತ ಮೊದಲು ತಾವೇ ಅವರನ್ನು ಕೊಂದು ಮುಗಿಸುವುದಕ್ಕೆ ಉಪಾಯ ಹೂಡುತ್ತಾರೆ. ವಾತಾಪಿಯನ್ನು ಕುರಿಯನ್ನಾಗಿಸಿ ಅದರಿಂದ ತಯಾರಾದ ಮಾಂಸದ ಭಕ್ಷವನ್ನ ಅಗಸ್ತ್ಯರಿಗೆ ನೀಡುವುದು, ಅದು ಅಗಸ್ತ್ಯರ ಹೊಟ್ಟೆ ಸೇರಿದ ಕೂಡಲೇ ವಾತಾಪಿ ತನಗಿದ್ದ ಮಾಯಾ ಶಕ್ತಿಯಿಂದ ಮತ್ತೆ ಜೀವ ಪಡೆದು ಮುನಿಗಳ ಹೊಟ್ಟೆಯನ್ನ ಸೀಳಿ ಹೊರ ಬರುವುದು, ಆ ಮೂಲಕ ಮುನಿಗಳನ್ನೇ ಕೊಂದು ಮುಗಿಸಿಬಿಡಲು ಈ ಈರ್ವರು ರಾಕ್ಷಸರು ತೀರ್ಮಾನ ಮಾಡಿಕೊಂಡರಂತೆ. ರಾಕ್ಷಸರ ಈ ಕುಟಿಲೋಪಾಯಗಳನ್ನ ಮೊದಲೇ ಅರಿತುಕೊಂಡ ಅಗಸ್ತ್ಯಮುನಿಗಳು ಕುರಿ ಮಾಂಸದ ಭಕ್ಷ್ಯವನ್ನ ತಿಂದ ತಕ್ಷಣ ತಮಗಿದ್ದ ದೈವೀಕ ಶಕ್ತಿಯ ಬಲದಿಂದ ಅದನ್ನು ಜೀರ್ಣಿಸಿಕೊಂಡು ಬಿಟ್ಟರಂತೆ. ಆ ಮೂಲಕ ವಾತಾಪಿಯನ್ನು ಯಾವುದೇ ತೊಂದರೆ ಇಲ್ಲದೆ ಕೊಂದು ಹಾಕಿದ ಅಗಸ್ತ್ಯರು ಅನಂತರ ಇಲ್ವಳನನ್ನೂ ಕೊಂದು ಮುಗಿಸಿದರಂತೆ. ಹೀಗಾಗಿ ಈ ಊರಿಗೆ ವಾತಾಪಿ ರಾಕ್ಷಸನ ಹೆಸರೇ ಬಂದಿದೆ ಎನ್ನಲಾಗುತ್ತದೆ. ಇನ್ನು ಬಾದಾಮಿ ಎನ್ನುವ ಹೆಸರು ಈ ಪ್ರದೇಶದ ಸುತ್ತಲಿನ ಬೆಟ್ಟ-ಗುಡ್ಡಗಳು ಬಾದಾಮಿಯ ಬಣ್ಣವನ್ನ ಹೋಲುವ ಕಾರಣದಿಂದ ಬಂದಿದೆ ಎನ್ನುವುದು ಬಹುಜನರ ವಾದ. ಇನ್ನು ಚಾಲುಕ್ಯ ಎನ್ನುವ ಹೆಸರಿನ ಮೂಲದ ಬಗ್ಗೆ ಹುಡುಕುತ್ತಾ ಸಾಗಿದರೆ ಮತ್ತೊಂದು ಪೌರಾಣಿಕ ಕಥೆ ತೆರೆದುಕೊಳ್ಳುತ್ತದೆ. ಸ್ವರ್ಗಾಧಿಪತಿಯಾದ ಇಂದ್ರ ಒಮ್ಮೆ ಭೂಮಿಯಲ್ಲಿ ಆಗುತ್ತಿರುವ ಅಧರ್ಮಗಳಿಂದ ನೊಂದು ಸೃಷ್ಟಿಕರ್ತನಾದ ಬ್ರಹ್ಮನಲ್ಲಿ ಧರ್ಮವನ್ನು ರಕ್ಷಿಸುವುದಕ್ಕೋಸ್ಕರ ಒಬ್ಬ ವೀರಾಧಿವೀರನನ್ನ ಸೃಷ್ಟಿಸುವಂತೆ ಕೋರಿ ತಪಸ್ಸು ಕೈಗೊಳ್ಳುತ್ತಾನೆ. ಇಂದ್ರನ ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಬೊಗಸೆ ಅಥವಾ ಚುಲಕದಿಂದ ವೀರನೊಬ್ಬನನ್ನ ಸೃಷ್ಟಿ ಮಾಡಿದನಂತೆ, ಅವನೇ ಚಾಲುಕ್ಯ ವಂಶದ ಮೂಲ ಪುರುಷ ಹಾಗು ಇದರಿಂದಾಗಿಯೇ ಆ ವಂಶಕ್ಕೆ ಚಾಲುಕ್ಯ ಎನ್ನುವ ಹೆಸರು ಬಂದಿದೆ ಎಂದು ಕೆಲವರು ತಮ್ಮ ವಾದ ಮುಂದಿಡುತ್ತಾರೆ. ಮತ್ತೆ ಕೆಲವು ಇತಿಹಾಸ ತಜ್ಞರ ವಾದದ ಪ್ರಕಾರ ಅಪ್ಪಟ ಕನ್ನಡದ ಪದಗಳಾದ ಸಲಿಕೆ, ಚಲಿಕೆ ಇಂದ ಚಳುಕ ಅನ್ನೋ ಪದ ಉತ್ಪತ್ತಿ ಆಗಿದ್ದು ಅದರಿಂದಲೇ ಚಾಲುಕ್ಯ ಎನ್ನುವ ಪದ ಹುಟ್ಟಿದೆ ಎನ್ನುವುದು. ಕದಂಬರ ರೀತಿ ಚಾಲುಕ್ಯರು ತಮ್ಮನ್ನ ತಾವು ಹರಿತಿ ಪುತ್ರರು, ಮಾನವ್ಯ ಗೋತ್ರದವರು ಎಂದು ಕರೆದುಕೊಂಡಿರುವುದರಿಂದ ಇವರ ಮಾತೃ ಭಾಷೆಯೂ ಕನ್ನಡವೇ ಎನ್ನುವುದು ಸರ್ವ ವಿಧಿತವಾಗಿದೆ. ಇದೇ ಆಧಾರದ ಮೇಲೆ ಕೆಲವು ವಿದ್ವಾಂಸರು ಇವರನ್ನು ಕದಂಬರ ಸಂಬಂಧಿಗಳೇ ಇರಬಹುದು ಎಂದೂ ಊಹಿಸಿದ್ದಾರೆ. ಚಾಲುಕ್ಯರು ತಮ್ಮ ಸೇನೆಗೆ ‘ಕರ್ಣಾಟಬಲ’ ಎಂದು ಹೆಸರಿಟ್ಟಿದ್ದು, ತಮ್ಮನ್ನ ತಾವು ಅಪ್ಪಟ ಕನ್ನಡದಲ್ಲಿ ಅರಸರು ಎಂದು ಕರೆದುಕೊಂಡಿದ್ದು, ಚಾಲುಕ್ಯರ ರಾಣಿ ವಿಜಯಾಂಕ ತನ್ನನ್ನು ತಾನು ‘ಕರ್ನಾಟಕ ರಾಜಪ್ರಿಯ’ಳೆಂದು ಕರೆದುಕೊಂಡಿದ್ದು ಈ ಎಲ್ಲವೂ ಚಾಲುಕ್ಯರ ಅಪ್ರತಿಮ ಕನ್ನಡ ಪ್ರೇಮಕ್ಕೆ ನಮಗೆ ಇಂದಿಗೂ ಪುರಾವೆಯಾಗಿ ಸಿಗುವ ವಿಚಾರಗಳು. ಚಾಲುಕ್ಯರು ಸ್ವಂತ ಸಾಮ್ರಾಜ್ಯವನ್ನಾಳುವ ಮಟ್ಟಿಗೆ ಬೆಳೆಯುವ ಮುನ್ನ ಅವರು ಕದಂಬರ ಮಾಂಡಲಿಕರಾಗಿದ್ದರು. ಜಯಸಿಂಹ ಎನ್ನುವ ವ್ಯಕ್ತಿ ಚಾಲುಕ್ಯ ಮನೆತನದ ಮೂಲಪುರುಷ. ಕ್ರಿಶ ೫೦೦-೫೨೦ರ ವರೆಗೆ ಕದಂಬರ ಸಾಮಂತನಾಗಿದ್ದ ಜಯಸಿಂಹ ಇಂದಿನ ವಿಜಯಪುರದ ಬಳಿ ಚಾಲುಕ್ಯ ಮನೆತನದ ಹುಟ್ಟಿಗೆ ಕಾರಣನಾದ. ಅಷ್ಟೇ ಅಲ್ಲದೆ ಈತ ಶ್ರೀವಲ್ಲಭ, ವಲ್ಲಭ, ವಲ್ಲಭ್ಹೇಂದ್ರ ಎಂಬ ಖ್ಯಾತಿಯನ್ನ ಕೂಡಾ ಹೊಂದಿದ್ದ. ತನ್ನ ಪ್ರಭುಗಳಾದ ಕದಂಬರಿಗಾಗಿ ಅನೇಕ ಯುದ್ಧಗಳಲ್ಲಿ ನೆರವಾಗಿದ್ದ ಜಯಸಿಂಹನ ಆಳ್ವಿಕೆ ಕ್ರಿಶ ೫೨೦ರಲ್ಲಿ ಕೊನೆಯಾಗಿ ತದನಂತರ ಈತನ ಮಗನಾದ ರಣಸಿಂಹ ಎಂದೇ ಖ್ಯಾತಿ ಪಡೆದಿದ್ದ ರಣರಂಗನು ಅಧಿಕಾರಕ್ಕೆ ಬರುತ್ತಾನೆ . ಕದಂಬ ವಂಶದ ಒಳಗೂ, ಹೊರಗುಗಳನ್ನ ಆಮೂಲಾಗ್ರವಾಗಿ ತಿಳಿದುಕೊಂಡಿದ್ದ ಈತ ಕದಂಬ ವಂಶದಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸಿ ಒಂದನೇ ಪುಲಿಕೇಶಿಯ ಸಹಾಯ ಪಡೆದು ಕದಂಬರ ಮೇಲೆ ದಾಳಿ ಮಾಡಿ ಅವರ ಆಡಳಿತ ಕೊನೆಗಾಣಿಸುತ್ತಾನೆ. ಹೀಗೆ ಕೇವಲ ಸಾಮಂತ ರಾಜರಾಗಿದ್ದ ಚಾಲುಕ್ಯರನ್ನು ತಮ್ಮದೇ ಸಾಮ್ರಾಜ್ಯ ಕಟ್ಟಿ ಆಳುವ ಮಟ್ಟಕ್ಕೆ ಬೆಳೆಸಿದ ಕೀರ್ತಿ ಒಂದನೇ ಪುಲಿಕೇಶಿಗೆ ಸಲ್ಲುತ್ತದೆ. ಹೀಗಾಗಿ ಆತನನ್ನೇ ಚಾಲುಕ್ಯ ಸಾಮ್ರಾಜ್ಯ ಸಂಸ್ಥಾಪಕ ಎಂದು ಗುರುತಿಸಲಾಗುತ್ತದೆ. ಸತ್ಯಾಶ್ರಯ, ರಣವಿಕ್ರಮ, ಶ್ರೀ ಪೃಥ್ವಿ ವಲ್ಲಭ, ಮಹಾರಾಜ, ರಾಜಸಿಂಹ, ಧರ್ಮ ಮಹಾರಾಜ, ಎಂಬೆಲ್ಲಾ ಬಿರುದುಗಳನ್ನು ಹೊಂದಿದ್ದ ಒಂದನೇ ಪುಲಿಕೇಶಿ ಅಶ್ವಮೇಧ, ಹಿರಣ್ಯಗರ್ಭ, ವಾಜಪೇಯ ಅಗ್ನಿಸ್ತೋಮ, ಬಹುಸುವರ್ಣ ಎಂಬೆಲ್ಲಾ ಯಜ್ಞಯಾಗಾದಿಗಳನ್ನು ಪೂರೈಸಿದ್ದ. ಇಂತಹ ಪುಲಿಕೇಶಿಗೆ ತನ್ನ ದೊಡ್ಡ ಮಗನಾದ ಕೀರ್ತಿವರ್ಮನ ಬೆಂಬಲ ಮತ್ತಷ್ಟು ಪುಷ್ಟಿ ನೀಡಿರುತ್ತದೆ. ಕ್ರಿಸ್ತಶಕ ೫೪೩ರಿಂದ ಕ್ರಿಸ್ತಶಕ ೫೬೬ರವರೆಗೆ ಆಡಳಿತ ಮಾಡಿದ ಒಂದನೇ ಪುಲಿಕೇಶಿಯ ನಂತರ ಕೀರ್ತಿವರ್ಮ ಚಾಲುಕ್ಯ ಸಿಂಹಾಸನವನ್ನೇರುತ್ತಾನೆ. ಕ್ರಿಸ್ತಶಕ ೫೬೭ರಿಂದ ಕ್ರಿಸ್ತಶಕ ೫೯೨ರವರೆಗೆ ಆಡಳಿತ ಮಾಡಿದ ಕೀರ್ತಿವರ್ಮ ಛತ್ತೀಸ್ ಗಡವನ್ನ ಆಳುತ್ತಿದ್ದ ನಳರು, ಕದಂಬರು, ಕೊಂಕಣದ ಮೌರ್ಯರು, ದಕ್ಷಿಣ ಕನ್ನಡ ಜಿಲ್ಲೆಯ ಆಳುಪರು ಹಾಗೂ ತಲಕಾಡಿನ ಗಂಗರನ್ನೆಲ್ಲಾ ಸೋಲಿಸಿ ಇಂದಿನ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೂ ಚಾಲುಕ್ಯ ಸಾಮ್ರಾಜ್ಯವನ್ನು ವಿಸ್ತರಿಸುತ್ತಾನೆ. ಕೀರ್ತಿರಾಜ, ಕತ್ತಿಅರಸ, ಮಹಾರಾಜ, ಸತ್ಯಾಶ್ರಯ, ಶ್ರೀಪೃಥ್ವಿ ವಲ್ಲಭ ಎಂದೆಲ್ಲಾ ಬಿರುದಾಂಕಿತನಾಗಿದ್ದ ಕೀರ್ತಿವರ್ಮ ಮಹಾಕೂಟ ಶಾಸನದಲ್ಲಿ ತಿಳಿಸಿರುವ ಹಾಗೆ ಈವತ್ತಿನ ಉತ್ತರಭಾರತದ ಅಂಗ, ವಂಗ, ಕಳಿಂಗವಲ್ಲದೆ ಕೇರಳ, ಪಾಂಡ್ಯ, ಪಲ್ಲವ, ಚೋಳ, ಆಳುಪ, ವೈಜಯಂತಿಯಲ್ಲೆಲ್ಲಾ ದಂಡ ಯಾತ್ರೆ ಮಾಡಿದ ಉಲ್ಲೇಖಗಳಿವೆ. ಅಷ್ಟೇ ಅಲ್ಲದೆ ಈ ಕೀರ್ತಿವರ್ಮನ ಮಗನೇ ಕನ್ನಡದ ಹೆಮ್ಮೆಯ ಪುರುಷ ಇಮ್ಮಡಿ ಪುಲಿಕೇಶಿ. ಬಾದಾಮಿ ನಗರದ ಹಾಗು ಕೋಟೆಯ ನಿರ್ಮಾತೃಗಳು ಅಪ್ಪ ಮಗನಾದ ಕೀರ್ತಿವರ್ಮ ಹಾಗು ಒಂದನೇ ಪುಲಿಕೇಶಿ. ಇದು ಬಾದಾಮಿ ಚಾಲುಕ್ಯರ ಸಾಮ್ರಾಜ್ಯ ಕರ್ನಾಟಕ ಭೂಪಟದಲ್ಲಿ ಪುಟಿದೆದ್ದ ಬಗೆ.

Related posts

ಕನ್ನಡ ಭಾಷೆಯ ಹಳೆತನದ ಬಗ್ಗೆ ನೀವರಿಯದ ಮಾಹಿತಿ

ಕರ್ನಾಟಕ ನೈಸರ್ಗಿಕ ಸಂಪತ್ತಿನ ಬಗ್ಗೆ ವಿಸ್ಮಯಕಾರಿ ಮಾಹಿತಿ

ಇದು ಕನ್ನಡ ನಾಡಿನ ಪ್ರಾಚೀನತೆ