ಕರ್ನಾಟಕದಲ್ಲಿ ಕದಂಬ ಸಾಮ್ರಾಜ್ಯ ಸ್ಥಾಪನೆ ಆದ ಆಸುಪಾಸಿಗೆ ಸ್ಥಾಪನೆಗೊಂಡಿದ್ದು ಗಂಗ ಸಾಮ್ರಾಜ್ಯ. ನಾಲ್ಕನೇ ಶತಮಾನದಲ್ಲೇ ಆರಂಭವಾದ ಈ ಸಾಮ್ರಾಜ್ಯ ಹನ್ನೊಂದನೇ ಶತಮಾನದ ಮೊದಲ ದಶಕದವರೆಗೂ ಕರ್ನಾಟಕದಲ್ಲಿ ಆಡಳಿತ ಮಾಡಿತ್ತು. ಕದಂಬರಿಗೆ ಹಾಗು ಚಾಲುಕ್ಯರಿಗೆ ಸಮಕಾಲೀನರಾಗಿ ದಕ್ಷಿಣ ಕರ್ನಾಟಕದಲ್ಲಿ ಪ್ರಬಲರಾಗಿ ಆಡಳಿತ ಮಾಡಿದ್ದ, ಕರ್ನಾಟಕದ ಶಿಲ್ಪ ಕಲಾ ವೈಭವಕ್ಕೆ ನವೀನ ರೂಪು-ರೇಷೆಯನ್ನು ಬರೆದ ಈ ಗಂಗ ಸಾಮ್ರಾಜ್ಯದ ಸ್ಥಾಪನೆಯಾದ ಕಥಾನಕ ಬಹು ರೋಚಕ. ಕರ್ನಾಟಕದ ಇತಿಹಾಸದ ಮೇಲೆ ಕಣ್ಣಾಡಿಸುತ್ತಾ ಸಾಗಿದರೆ ಅಲ್ಲಿ ಈ ಗಂಗರಿಗೆ ಒಂದು ವಿಶಿಷ್ಟ ಸ್ಥಾನವೇ ಇದೆ. ಅಪ್ರತಿಮ ಶೂರರು, ಮೇಧಾವಿಗಳೂ ಆಗಿದ್ದ ಈ ಮನೆತನದವರು ಕಲಾಪೋಷಕರೂ ಕೂಡ ಆಗಿದ್ದರು. ನಾಡು ನುಡಿಯ ವಿಚಾರದಲ್ಲಿ ಸದಾ ಟೊಂಕ ಕಟ್ಟಿ ನಿಲ್ಲುತ್ತಿದ್ದ ಇವರು ರಣಭೂಮಿಯಲ್ಲಿ ನಿಂತ ಎದುರಾಳಿಗಳಿಗೆ ಸಾಕ್ಷಾತ್ ಯಮನ ದರ್ಶನ ಮಾಡಿಸಿದ್ದ ಅನೇಕ ಉದಾಹರಣೆಗಳು ನಮಗೆ ಇತಿಹಾಸದ ಪುಟಗಳಿಂದ ತಿಳಿದು ಬರುತ್ತವೆ. ರಾಜ ಧರ್ಮದ ರೀತಿ ಬರೀ ಕತ್ತಿ ಹಿಡಿದು ಯುದ್ಧ ಮಾಡಿಕೊಂಡೇ ಇರದ ಈ ಮನೆತನದ ಅರಸರು ಸ್ವತಃ ಕವಿಗಳು, ಕವನ-ಕಾವ್ಯಗಳಲ್ಲಿ ಅಪಾರ ಆಸಕ್ತಿ ಉಳ್ಳವರು ಆಗಿದ್ದು ಖುದ್ದು ತಾವೇ ಕನ್ನಡದಲ್ಲಿ ಹಾಗು ಸಂಸ್ಕೃತದಲ್ಲಿ ಗ್ರಂಥಗಳನ್ನು ಬರೆದಿದ್ದಾರೆ. ಇವರ ಕಲಾ ಅಭಿರುಚಿಗೆ ಇಂದಿಗೂ ಕೈಗನ್ನಡಿಯ ರೀತಿ ನಮಗೆ ಕಾಣಸಿಗುವುದು ಶ್ರವಣಬೆಳಗೊಳದ ಗೊಮ್ಮಟೇಶ್ವರ. ಒಂದೇ ಶಿಲೆಯಲ್ಲಿ ಗೊಮ್ಮಟೇಶ್ವರನ ಮೂರ್ತಿಯನ್ನು ನಿರ್ಮಿಸಿ ಕರ್ನಾಟಕದ ಶಿಲ್ಪ ಕಲಾ ವೈಭವವನ್ನ ಇಡೀ ಜಗತ್ತು ತಿರುಗಿ ನೋಡುವ ಹಾಗೆ ಮಾಡಿದ ಕೀರ್ತಿ ಈ ಗಂಗರಿಗೇ ಸಲ್ಲಬೇಕು. ಗಂಗರ ಐತಿಹ್ಯವನ್ನ ತಡಕಿದವರಿಗೆ ಅವರು ಶ್ರೀರಾಮಚಂದ್ರನ ಇಕ್ಷ್ವಾಕು ಕುಲದವರು ಎಂಬ ಮಾಹಿತಿ ದೊರೆಯುತ್ತದೆ. ಇಲ್ಲಿ ನಾವು ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಭಾರತದ ಅರಸು ಮನೆತನಗಳನ್ನು ಶ್ರೀ ರಾಮಚಂದ್ರನ ಇಕ್ಷ್ವಾಕು ವಂಶಕ್ಕೋ, ಶ್ರೀ ಕೃಷ್ಣನ ಯಾದವ ಕುಲಕ್ಕೋ, ಪಾಂಡವರ ವಂಶಕ್ಕೋ ಸೇರಿದ್ದವು ಎಂದು ಹೇಳುವ ಪರಿಪಾಠ ಬಹಳ ಹಿಂದಿನಿಂದ ಬಂದಿದೆ. ಇದಕ್ಕೆ ತಲಕಾಡು ಗಂಗರೂ ಹೊರತಾಗಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಕೆ.ಪಿ.ಜಯಸ್ವಾಲ್ ಅವರು ಗಂಗರು ಕಣ್ವಾಯನ ಗೋತ್ರದವರು ಹಾಗು ಇಕ್ಷ್ವಾಕು ವಂಶಕ್ಕೆ ಸೇರಿದವರು ಎಂದು ಹೇಳಿದ್ದರೆ, ಪ್ರೊ. ಕೃಷ್ಣರಾವ್ ಅವರು ಗಂಗರನ್ನು ಶಾತವಾಹನರ ಮಾಂಡಲೀಕರಾದ ಆಂಧ್ರ ಇಕ್ಷ್ವಾಕುಗಳು ಎಂದೂ, ಪ್ರೊ.ಆರೋಗ್ಯಸ್ವಾಮಿಯವರು ಗಂಗರು ತಮಿಳುನಾಡಿನ ಉತ್ತರಭಾಗಗಳಾದ ಕೊಂಗುನಾಡಿನಿಂದ ಬಂದವರು ಹಾಗಾಗಿ ಇವರು ತಮಿಳರು ಎಂದು ತಮ್ಮ ವಾದ ಮುಂದಿಟ್ಟಿದ್ದಾರೆ. ಆದರೆ ಡಾ.ಕೃಷ್ಣರಾವ್ , ಲೆವಿಸ್ ರೈಸ್, ಆರ್.ಹೆಚ್. ಪಂಚಮುಖಿ, ಪ್ರೊ.ಅಡಿಗರ ಪ್ರಕಾರ ಗಂಗರು ಮೂಲತಃ ಕನ್ನಡಿಗರು. ಇವರ ಹೆಸರಿನಲ್ಲಿ ‘ಗಂಗ’ ಎಂದು ಬರುವುದಕ್ಕೂ ಉತ್ತರ ಭಾರತದಲ್ಲಿ ಹರಿಯುವ ಗಂಗಾ ನದಿಗೂ ಯಾವುದೇ ಸಂಬಂಧ ಇಲ್ಲ. ಬದಲಾಗಿ ದಕ್ಷಿಣದ ಗಂಗೆ ಎಂದೇ ಪರಿಗಣಿಸಲ್ಪಡುವ ಕಾವೇರಿ ತಟದಲ್ಲಿ ಈ ಅರಸು ಮನೆತನ ಇದ್ದ ಕಾರಣ ‘ಗಂಗ’ ಎಂಬ ಹೆಸರು ಈ ವಂಶಕ್ಕೆ ಪ್ರಾಪ್ತವಾಗಿದೆ. ಪಾಶ್ಚಿಮಾತ್ಯ ವಿದ್ವಾಂಸ ಪ್ರೊಫೆಸರ್.ಎಡ್ಗರ್ ಥರ್ಸ್ಟನ್(Edgar Thurston) ಎನ್ನುವರ ಪ್ರಕಾರ ಗಂಗರು ಕ್ರಿಸ್ತಶಕದ ಆರಂಭದಿಂದಲೇ ಗಂಗವಾಡಿಯಲ್ಲಿ ಆಡಳಿತ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಕನ್ನಡಿಗರ ಒಕ್ಕಲಿನ ಸಮುದಾಯದಲ್ಲಿ ‘ಗಂಗಟಿಕಾರ’ ಎನ್ನುವ ಕುಲ ಈಗಲೂ ಇದ್ದು, ಈ ಗಂಗಟಿಕಾರರೇ ಹಿಂದೆ ಗಂಗ ಸಾಮ್ರಾಜ್ಯ ಕಟ್ಟಿರುವ ಬಗ್ಗೆ ಆಧಾರಗಳು ನಮಗೆ ದೊರೆಯುತ್ತವೆ. ಗಂಗ ವಂಶದ ಮೂಲಪುರುಷನಿಂದ ಗಂಗ ವಂಶ ಸ್ಥಾಪನೆಯಾಗಿದ್ದು ಹಾಗು ಮೊಟ್ಟ ಮೊದಲಿಗೆ ಆತ ಸಾಮ್ರಾಜ್ಯಕ್ಕೆ ಶಿಲಾನ್ಯಾಸ ಮಾಡಿದ ಬಗ್ಗೆ ರೋಚಕ ಮಾಹಿತಿಗಳು ಇಂದು ನಮಗೆ ಲಭ್ಯ ಇವೆ. ಜೈನ ಮುನಿಯಾದ ಸಿಂಹನಂದಿ ಎನ್ನುವ ಆಚಾರ್ಯರ ಬಳಿಯಿದ್ದ ದಡಿಗ ಅಥವಾ ಕೊಂಗುಣಿ ವರ್ಮ ಎಂಬ ಶಿಷ್ಯ ಬಾಲ್ಯದಿಂದಲೂ ಬಹಳ ಚುರುಕುಮತಿ ಹಾಗು ಮಹಾನ್ ಪರಾಕ್ರಮಿ ಆಗಿದ್ದವನು. ಈತನ ಶೌರ್ಯ-ಪರಾಕ್ರಮಗಳ ಬಗ್ಗೆ ಅರಿವಿದ್ದ ಆಚಾರ್ಯರು ಒಂದು ಸಲ ಒಂದು ಕತ್ತಿಯನ್ನ ದಡಿಗನಿಗೆ ಕೊಟ್ಟರಂತೆ, ಆ ಕತ್ತಿಯನ್ನ ಬಳಸಿ ದಡಿಗ ಒಂದು ದೊಡ್ಡ ಕಲ್ಲಿನ ಕಂಬವನ್ನ ತುಂಡು ಮಾಡಿದನಂತೆ. ಇಂತಹ ತಾಕತ್ತು, ಪರಾಕ್ರಮಗಳನ್ನ ಕಂಡ ಸಿಂಹನಂದಿ ಆಚಾರ್ಯರು ಈ ಬಾಲಕನಿಗೆ ಒಂದು ಸಾಮ್ರಾಜ್ಯವನ್ನ ಕಟ್ಟುವುದಕ್ಕೆ ಪ್ರೇರೇಪಿಸಿದರಂತೆ. ಹೀಗೆ ಪ್ರಾರಂಭವಾಗಿದ್ದೆ ಗಂಗ ಸಾಮ್ರಾಜ್ಯ. ಇದೇ ಸಮಯಕ್ಕೆ ಉತ್ತರದ ಸಮುದ್ರಗುಪ್ತರು ದಕ್ಷಿಣದಲ್ಲಿ ಕಂಚಿಯವರೆಗೆ ವಿಜಯಯಾತ್ರೆಯನ್ನ ಮಾಡಿ ಪಲ್ಲವರನ್ನ ಸೋಲಿಸಿ ಕಂಚಿಯನ್ನು ತಮ್ಮ ಕೈವಶ ಮಾಡಿಕೊಂಡಿರುತ್ತಾರೆ. ಇತ್ತ ಶಾತವಾಹನರ ಸಾಮ್ರಾಜ್ಯವೂ ಪತನವಾಗಿದ್ದು ಗಂಗರ ಹೊಸ ಸಾಮ್ರಾಜ್ಯ ಉದಯವಾಗುವುದಕ್ಕೆ ಅನುಕೂಲವಾಗಿ ಪರಿಣಮಿಸುತ್ತದೆ. ಪಲ್ಲವರ ವಿರುದ್ಧ ಬಂಡೆದ್ದು ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡ ಕದಂಬರ ರೀತಿಯಲ್ಲಿಯೇ ಗಂಗರು ಕೂಡ ಪ್ರಯತ್ನ ಮಾಡಿ ಯಶಸ್ಸು ಗಳಿಸುತ್ತಾರೆ. ಗಂಗ ಸಾಮ್ರಾಜ್ಯ ಆರಂಭದಲ್ಲಿ ಕುವಲಾಳ ಅಥವಾ ಇಂದಿನ ಕೋಲಾರವನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸುತ್ತದೆ. ಆದರೆ ನಂತರದ ರಾಜ ತಾಂತ್ರಿಕ ಕಾರಣಗಳಿಂದಾಗಿ ಗಂಗರು ತಮ್ಮ ರಾಜಧಾನಿಯನ್ನು ಬದಲಾಯಿಸುತ್ತಾ ಸಾಗುತ್ತಾರೆ. ಮೈಸೂರು ಜಿಲ್ಲೆಯ ತಲಕಾಡು, ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಳಿ ಇರುವ ಮಂಕುಂದ, ಬೆಂಗಳೂರು ಗ್ರಾಮಾಂತರ ಪ್ರದೇಶದ ನೆಲಮಂಗಲದ ಬಳಿಯ ಮಣ್ಣೆ ಅಥವಾ ಮಾನ್ಯಪುರವನ್ನ ವಿವಿಧ ಕಾಲಘಟ್ಟಗಳಲ್ಲಿ ರಾಜಧಾನಿಯಾಗಿ ಮಾಡಿಕೊಳ್ಳುವ ಗಂಗರು ಸುದೀರ್ಘವಾಗಿ ದಕ್ಷಿಣ ಕರ್ನಾಟಕ ಪ್ರಾಂತ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಂತಹವರಾಗಿರುತ್ತಾರೆ. ಕ್ರಿಶ ೩೫೦ರಲ್ಲಿ ಆರಂಭವಾದ ಗಂಗರ ಆಡಳಿತ ಕ್ರಿಶ ೧೦೦೦ದವರೆಗೂ ಮುಂದುವರೆದಿತ್ತು. ತಮ್ಮ ಉಚ್ಛ್ರಾಯ ಸ್ಥಿತಿಯಲ್ಲಿ ಗಂಗರು ಇಂದಿನ ಮೈಸೂರು, ಚಾಮರಾಜನಗರ, ಬೆಂಗಳೂರು, ಹಾಸನ, ಕೋಲಾರ, ತುಮಕೂರು, ಮಂಡ್ಯವಲ್ಲದೆ ತಮಿಳುನಾಡಿನ ಉತ್ತರ ಭಾಗಗಳಾದ ಕೊಯಮತ್ತೂರು ಹಾಗು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳನ್ನೂ ಒಳಗೊಂಡು ಗಂಗವಾಡಿ ಅಂತಲೇ ಪ್ರಸಿದ್ಧಿಯಾಗಿದ್ದ ಸಾಮ್ರಾಜ್ಯವನ್ನು ಮುನ್ನಡೆಸಿದ್ದರು. ಸುಮಾರು ೬೫೦ವರ್ಷಗಳ ಸುದೀರ್ಘ ಆಡಳಿತ ಮಾಡಿ ಕನ್ನಡ ನಾಡನ್ನು ಶ್ರೀಮಂತಗೊಳಿಸಿದ ಗಂಗರು ಸುಮಾರು ೨೫೦ವರ್ಷಗಳವರೆಗೆ ಸ್ವಂತ ಸಾಮ್ರಾಜ್ಯವಾಗಿಯೂ, ನಂತರ ಬಾದಾಮಿ ಚಾಲುಕ್ಯರ, ರಾಷ್ಟ್ರಕೂಟರ, ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಆಡಳಿತ ಮಾಡಿದ್ದರು. ಈ ಗಂಗರ ವಂಶಾವಳಿ ತುಸು ದೊಡ್ಡ ಪಟ್ಟಿಯನ್ನೇ ಹೊಂದಿದೆ. ದಡಿಗ ಅಥವಾ ಕೊಂಗುಣಿ ವರ್ಮನಿಂದ ಆರಂಭಗೊಂಡ ಈ ಮನೆತನ ಮಾಧವ, ಆರ್ಯವರ್ಮ, ಅವಿನೀತ, ದುರ್ವಿನೀತ, ಶ್ರೀವಿಕ್ರಮ, ಶಿವಮಾರ, ಶ್ರೀ ಪುರುಷ, ರಾಚಮಲ್ಲ, ಭತುಗ, ಮಾರಸಿಂಹ ಹೀಗೆ ಅನೇಕ ರಾಜ ಮಹಾರಾಜರುಗಳನ್ನ ಹೊಂದಿತ್ತು. ಗಂಗರಲ್ಲೇ ಅತಿ ಶ್ರೇಷ್ಠ ಹಾಗು ಬಲಾಢ್ಯ ಎಂದು ಕರೆಸಿಕೊಂಡಿರುವ ಅರಸ ದುರ್ವಿನೀತ. ದುರ್ವಿನೀತ ಆಡಳಿತದ ಚುಕ್ಕಾಣಿ ಹಿಡಿಯುವುದು ಆತನ ತಂದೆ ಅವಿನೀತನಿಗೆ ಇಷ್ಟವಿರುವುದಿಲ್ಲ. ಹಾಗಾಗಿ ಕದಂಬ ಹಾಗು ಪಲ್ಲವರ ಜೊತೆ ಸೇರಿ ಅವಿನೀತ ಸಂಚು ರೂಪಿಸಿ ದುರ್ವಿನೀತ ಸಿಂಹಾಸನವನ್ನೇರುವುದನ್ನು ತಡೆಯುವುದಕ್ಕೆ ಪ್ರಯತ್ನ ಮಾಡುತ್ತಾನೆ. ಇದರಿಂದ ಕುಪಿತನಾದ ದುರ್ವಿನೀತ ಕದಂಬರನ್ನು ಯುದ್ಧದಲ್ಲಿ ಸೋಲಿಸಿ ಮುಂದೆ ಪಲ್ಲವರ ಮೇಲೂ ಯುದ್ಧ ಸಾರಿ ಪಲ್ಲವರ ಸಾಮ್ರಾಜ್ಯದ ಉತ್ತರದ ಭಾಗವಾಗಿದ್ದ ಕೊಂಗುನಾಡನ್ನು ಗೆದ್ದು ಅದನ್ನು ತನ್ನ ಸಾಮ್ರಾಜ್ಯದೊಳಗೆ ವಿಲೀನ ಮಾಡಿಕೊಳ್ಳುತ್ತಾನೆ. ಆ ಯುದ್ಧಗಳಲ್ಲಿ ಅವನಿಗೆ ನೆರವಾಗಿದ್ದ ಬಾದಾಮಿ ಚಾಲುಕ್ಯರ ದೊರೆ ವಿಜಯಾದಿತ್ಯ ಅಥವಾ ಇಮ್ಮಡಿ ಪುಲಿಕೇಶಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿಸುವ ದುರ್ವಿನೀತ ಮುಂದೆ ಗಂಗ-ಚಾಲುಕ್ಯ ರಾಜ ಮನೆತನಗಳ ವೈವಾಹಿಕ ಹಾಗು ರಾಜಕೀಯ ಸಂಬಂಧಗಳಿಗೆ ನಾಂದಿ ಹಾಡುತ್ತಾನೆ. ಈ ದುರ್ವಿನೀತನ ಬರಿ ಶೂರ-ವೀರ ಮಾತ್ರ ಎನಿಸಿಕೊಳ್ಳದೆ ತಾನೊಬ್ಬ ಕವಿಯೂ ಆಗಿದ್ದ. ಈತ ಕನ್ನಡದ ಆದಿಕವಿ ಪಂಪನಿಗಿಂತ ಮೊದಲೇ ಕನ್ನಡದಲ್ಲಿ ಕಾವ್ಯ ರಚನೆ ಮಾಡಿದ ಕವಿಗಳಲ್ಲೊಬ್ಬ. ಅಮೋಘ ವರ್ಷನ ಕವಿರಾಜ ಮಾರ್ಗದಲ್ಲಿ ಪೂರ್ವ ಕಾಲದ ಕವಿಗಳ ಪಟ್ಟಿಯಲ್ಲಿ ಈತನೂ ಸ್ಥಾನ ಪಡೆದಿದ್ದಾನೆ. ಈ ರೀತಿ ಕರ್ನಾಟಕದಲ್ಲಿ ಅವಸಾನಗೊಂಡ ಗಂಗ ಸಾಮ್ರಾಜ್ಯ ಮುಂದೆ ಹನ್ನೆರಡನೇ ಶತಮಾನದಲ್ಲಿ ಒಡಿಶಾ ರಾಜ್ಯದಲ್ಲಿ ‘ಪೂರ್ವದ ಗಂಗ’ರಾಗಿ ಮತ್ತೆ ತಲೆ ಎತ್ತಿ ವಿಶ್ವ ವಿಖ್ಯಾತ ಕೊನಾರ್ಕ್ ಸೂರ್ಯದೇಗುಲ, ಪುರಿ ಜಗನ್ನಾಥ ಮಂದಿರವಷ್ಟೇ ಅಲ್ಲದೆ ಇನ್ನು ಅನೇಕ ದೇಗುಲಗಳ ನಿರ್ಮಾಣಕ್ಕೆ ಕಾರಣವಾಗಿದ್ದು ಇದೀಗ ಇತಿಹಾಸ. ಮುಂದೆ ಬದಲಾದ ಸನ್ನಿವೇಶಗಳಲ್ಲಿ ಗಂಗರು ರಾಷ್ಟ್ರಕೂಟರ ಹಾಗು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ರಾಜ್ಯಭಾರ ಮಾಡುವ ಮಟ್ಟಕ್ಕೆ ಬಂದು ತಲುಪುತ್ತಾರೆ. ಕ್ರಿಶ ೧೦೦೪ರ ಸುಮಾರಿಗೆ ಕಲ್ಯಾಣಿ ಚಾಲುಕ್ಯರ ಹಾಗು ಚೋಳರ ಘನಘೋರ ಯುದ್ಧಗಳ ಸಂದರ್ಭಗಳಲ್ಲಿ ಚೋಳರಿಂದ ಸೋತುಈ ಗಂಗ ವಂಶ ಕೊನೆಗೊಳ್ಳುತ್ತದೆ.