ಕನ್ನಡ ಭಾಷೆಯ ಹಳೆತನದ ಬಗ್ಗೆ ನೀವರಿಯದ ಮಾಹಿತಿ

Garden City, Silicon city, Pensioners Paradise ಹೀಗೆ ವಿವಿಧ ನಾಮ ವಿಶೇಷಣಗಳಿಂದ ಕರೆಸಿಕೊಳ್ಳುತ್ತಿರುವ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಕಣ್ಮರೆಯಾಗುತ್ತಿರುವುದು ನಿಜಕ್ಕೂ ದುರಂತ. ಈ ದಿನಗಳಲ್ಲಿ ಕನ್ನಡ ನುಡಿಯನ್ನು ಬಳಸದೇ ಇರುವ ನವಯುವಕರ ಬಗೆಗೋ ಅಥವಾ ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಆಶ್ರಯ ಪಡೆದುಕೊಂಡಿರುವ ಅನ್ಯ ರಾಜ್ಯದವರೊಂದಿಗೋ, ಕನ್ನಡದಲ್ಲಿ ಮಾತನಾಡಿಬಿಟ್ಟರೆ ತಮ್ಮ ಘನತೆಗೆ ಎಲ್ಲಿ ಕುಂದು ಉಂಟಾಗಿ ಬಿಡುತ್ತದೋ ಅಂತ ಸಿಕ್ಕ ಸಿಕ್ಕ ಭಾಷೆಗಳಲ್ಲಿ ಮಾತಾಡೋ ಕೆಲವು ಕನ್ನಡಿಗರ ಬಗ್ಗೆ ನಿಜಕ್ಕೂ ಬೇಸರ ಉಂಟಾಗುತ್ತದೆ. ಆದರೂ ಒಮ್ಮೊಮ್ಮೆ ಯೋಚಿಸಿದಾಗ ಕನ್ನಡ ಬಂದರೂ ಮಾತನಾಡದಿರುವ ಕನ್ನಡಿಗರಿಗೇ ಆಗಲಿ ಅಥವಾ ಕನ್ನಡವನ್ನು ಅಭಿಮಾನ ಅಂತಲೇ ಭಾವಿಸಿ ಈ ಭಾಷೆಯನ್ನು ಮಾತನಾಡುವ ಕನ್ನಡಿಗರಿಬ್ಬರಿಗೂ ಕನ್ನಡದ ಹಳೆತನದ ಬಗ್ಗೆ ಎಷ್ಟು ಮಾಹಿತಿ ಇದೆ ಅನ್ನುವುದು ಯಾರಿಗೂ ತಿಳಿದಿಲ್ಲ. ವಿಶ್ವಸಂಸ್ಥೆಯ ಒಂದು ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ಸುಮಾರು ೭೦೦೦ ಭಾಷೆಗಳಿವೆ. ಆ ಏಳು ಸಾವಿರ ಭಾಷೆಗಳಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚಿನ ಭಾಷೆಗಳು ೨೫೦೦ ನೇ ಇಸವಿಯ ಹೊತ್ತಿಗೆ ಕಣ್ಮರೆ ಆಗಿಬಿಡುತ್ತವೆ ಅನ್ನುವುದು ಕೂಡ ವಿದ್ವಾಂಸರ ಒಂದು ಅಂದಾಜು. ನಮ್ಮ ಭಾರತದಲ್ಲಿರುವಷ್ಟು ಭಾಷಾ ವೈವಿಧ್ಯತೆ ಪ್ರಪಂಚದ ಇತರ ದೇಶಗಳಲ್ಲಿ ಕಾಣುವುದು ಅಸಾಧ್ಯ. ಇಲ್ಲಿ ೧೭೦೦ ಭಾಷೆಗಳಿದ್ದು ಅವುಗಳ ಪೈಕಿ ೨೨ ಭಾಷೆಗಳನ್ನು ನಮ್ಮ ಸಂವಿಧಾನದಲ್ಲಿ ಅಧಿಕೃತ ಭಾಷೆಗಳನ್ನಾಗಿ ಘೋಷಿಸಲಾಗಿದೆ. ಅದರಲ್ಲಿ ಕನ್ನಡ ಮಾತ್ರ ಅಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಉರ್ದು, ಸೇರಿ ಇನ್ನಿತರ ಭಾಷೆಗಳು ಇವೆ. ನಮ್ಮ ದೇಶದ ಉತ್ತರ ಭಾಗದಲ್ಲಿ ಈಗ ಚಾಲ್ತಿಯಲ್ಲಿ ಇರುವ ಭಾಷೆಗಳಿಗೆ ಹೋಲಿಸಿಕೊಂಡರೆ ದಕ್ಷಿಣ ಭಾರತದ ಭಾಷೆಗಳು ಪುರಾತನವಾದವುಗಳು. ಉತ್ತರದ ಈಗಿನ ಯಾವ ಭಾಷೆಗೂ ಸಾವಿರ ವರ್ಷಗಳಿಗೆ ಮೀರಿದ ಇತಿಹಾಸ ಇಲ್ಲ ಎನ್ನುವುದು ಈಗ ಗೌಪ್ಯವಾಗಿ ಉಳಿದಿಲ್ಲ.</p> ಉತ್ತರ ಭಾರತದ ಮೇಲೆ ಬಹು ಧೀರ್ಘ ಕಾಲ ಅಧಿಕಾರ ಸ್ಥಾಪಿಸಿಕೊಂಡಿದ್ದ ದೆಹಲಿಯ ಸುಲ್ತಾನರು, ಮೊಘಲರು ಅಲ್ಲಿ ಹಿಂದೆ ಮಾತನಾಡುತ್ತಿದ್ದ ಪ್ರಾಕೃತದ ಬದಲಿಗೆ ಅರೇಬಿಕ್, ಪರ್ಷಿಯನ್, ಉರ್ದು ಇತ್ಯಾದಿ ಭಾಷೆಗಳನ್ನ ಬಳಸಿದ ಕಾರಣದಿಂದ ಅಲ್ಲಿನ ಹಳೆಯ ಭಾಷೆ ಪ್ರಾಕೃತ ಭಾಷೆ ಜೀವಂತವಾಗಿ ಉಳಿಯಲಿಲ್ಲ. ಆದರೆ ಭಾರತದ ದಕ್ಷಿಣದಲ್ಲಿ ಚಾಲ್ತಿಯಲ್ಲಿರುವ ಕನ್ನಡ-ತಮಿಳು ಅತಿ ಪ್ರಾಚೀನ ನುಡಿಗಳು ಅನ್ನುವುದನ್ನ ಇದೀಗ ಎಲ್ಲಾ ವಿದ್ವಾಂಸರುಗಳು ಒಪ್ಪಿಕೊಂಡಿದ್ದಾರೆ. ಅದರಲ್ಲೂ ಕನ್ನಡ ಭಾಷೆಯ ಹಳೆತನ ದಕ್ಷಿಣ ಭಾರತದ ಭಾಷೆಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದನ್ನ ಹೊರತು ಪಡಿಸಿದರೆ ಭಾರತ ಉಪಖಂಡದಾದ್ಯಂತ ಸಂಸ್ಕೃತ ಭಾಷೆಗೆ ಕೂಡ ತುಂಬಾ ಪ್ರಾಚೀನತೆ ಇದೆ, ಆದರೂ ಅದು ಈವತ್ತಿಗೆ ಜನರ ಆಡುಭಾಷೆಯಾಗಿ ಉಳಿಯದ ಕಾರಣ ಕಾಲಕ್ರಮೇಣ ಕುಗ್ಗಿ ಅತಿ ಕಡಿಮೆ ಜನರು ಮಾತನಾಡುವ ಭಾಷೆಯಾಗಿ ಹೋಗಿದೆ. ಕನ್ನಡ ಭಾಷೆಯ ಇತಿಹಾಸದತ್ತ ಗಮನ ಹರಿಸಿದರೆ ನಮಗೆ ಮೊದಲು ಗೋಚರಿಸುವುದು ಅಶೋಕನ ಪ್ರಾಕೃತ ಶಾಸನಗಳಲ್ಲಿ ಸಿಗುವ ಅನೇಕ ಕನ್ನಡದ ಪದಗಳು. ಅದಷ್ಟೇ ಅಲ್ಲದೆ ತಮಿಳಿನ ಪ್ರಾಚೀನ ಶಾಸನಗಳಲ್ಲೂ ಅನೇಕ ಕನ್ನಡದ ಪದಗಳು ಇವೆ ಎಂದು ಖ್ಯಾತ ಭಾಷಾ ತಜ್ಞ ಐರಾವತಂ ಮಹದೇವನ್ ಹಾಗೂ ಷಡಕ್ಷರಿ ಶೆಟ್ಟರ್ ಅವರು ಈಗಾಗಲೇ ನಿರೂಪಿಸಿದ್ದಾರೆ. ಸಾಮ್ರಾಟ ಅಶೋಕ ಆಡಳಿತದಿಂದ ಹಿಡಿದು ಕನ್ನಡದ ಮೊಟ್ಟ ಮೊದಲ ರಾಜ ಮನೆತನ ಕದಂಬರವರೆಗೆ ಬೆಳಕಿಗೆ ಬಂದ ಕನ್ನಡದ ಪದಗಳು ಯಾವುವು ಅಂತ ಗಮನಿಸಿದರೆ ‘ಇಸಿಲ’ ಎನ್ನುವ ಕನ್ನಡದ ಪದ ಮೊದಲು ಅಶೋಕನ ಶಾಸನದಲ್ಲಿ ಕಂಡುಬಂದಿದ್ದಾಗಿ ಮಾಹಿತಿ ದೊರೆಯುತ್ತದೆ. ಅದರ ಜೊತೆ ಜೊತೆಗೆ ಪ್ರಾಕೃತ ಭಾಷೆಯಲ್ಲಿ ಹಾಗೂ ಬ್ರಾಹ್ಮೀ ಲಿಪಿಯಲ್ಲಿ ಬರೆಯಲ್ಪಟ್ಟ ತೀರ್, ತುಪ್ಪ, ಪೆಟ್ಟು, ಪೊಟ್ಟು, ಪೊಡೆ ಮುಂತಾದ ಪದಗಳೂ ಇವೆ ಎಂಬ ಮಾಹಿತಿಯೂ ಸಿಗುತ್ತದೆ. ಹಾಗೇ ದಕ್ಷಿಣ ಭಾರತದ ತಮಿಳು ಶಾಸನಗಳಲ್ಲಿ ಕೂಡ ಹೇರಳವಾದ ಕನ್ನಡದ ಪದಗಳನ್ನು ಗುರುತಿಸಿದ್ದಾರೆ. ಕನ್ನಡದ ‘ಗಾವುಡಿ’ ಎನ್ನುವ ಪದ ತಮಿಳಿನಲ್ಲಿ ‘ಕಾವುಡಿ’ ಆದರೆ, ‘ಹೊಸಿಲು’ ಎಂಬ ಕನ್ನಡ ಪದ ತಮಿಳಿನಲ್ಲಿ ‘ಪೊಸಿಲ್’ ಆಗಿದೆ. ಇದಿಷ್ಟೇ ಅಲ್ಲದೆ ಕನ್ನಡದ ವ್ಯಕ್ತಿಗಳಾದ ‘ಅಯ್ ಜಯ್ಯ’, ‘ಒಪ್ಪಣಪ್ಪ’ ಎಂಬುವರುಗಳ ಬಗ್ಗೆ ತಮಿಳು ಗ್ರಂಥಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ಇವಿಷ್ಟು ಕನ್ನಡದ ಪದಗಳ ಹಾಗೂ ವ್ಯಕ್ತಿಗಳ ಬಗೆಗಿನ ಪ್ರಾಚೀನ ಮಾಹಿತಿಗಳಾದ್ರೆ, ಕನ್ನಡ ಸೀಮೆಯ ಊರುಗಳ ಪ್ರಾಚೀನತೆಯಲ್ಲಿ ಕೂಡಾ ಕನ್ನಡ ಹಿಂದೆ ಉಳಿದಿಲ್ಲ. ಗ್ರೀಕ್ ನ ಖ್ಯಾತ ಭೂಗೋಳಶಾಸ್ತ್ರಜ್ಞ ‘ಟಾಲೆಮಿ’ಯು ಬಾದಾಮಿ, ಕಲ್ಕೇರಿ, ಮುದಗಲ್, ಪಟ್ಟದಕಲ್, ಹೂವಿನಹಿಪ್ಪರಗಿ, ಸವದಿ, ಬನವಾಸಿ, ಮಲ್ಪೆ, ನೇತ್ರಾಣಿ ಮುಂತಾದ ಊರುಗಳನ್ನ ಹೆಸರಿಸಿದ್ದಾನೆ. ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇವೆಲ್ಲ ಅಪ್ಪಟ ಕನ್ನಡದ ಊರುಗಳ ಹೆಸರುಗಳು. ಇವುಗಳೆಲ್ಲಕ್ಕೂ ಮೀರಿ ನಮ್ಮನ್ನು ಆಶ್ಚರ್ಯಕ್ಕೆ ದೂಡುವ ಮತ್ತೊಂದು ಐತಿಹ್ಯ ಅಂದರೆ ಅದು ಸುಮಾರು ಮೂರನೇ ಶತಮಾನದಲ್ಲಿ ಈಜಿಪ್ಟಿನಲ್ಲಿ ಆಡುತ್ತಿದ್ದ ಗ್ರೀಕ್ ನಾಟಕ ‘ಚಾರಿಷನ್ ಮಿಮ್’. ಚಾರಿಷನ್ ಮಿಮ್ ನ ಕಥೆಯೇ ರೋಚಕವಾಗಿದ್ದು, ಅದರಲ್ಲಿ ಬರುವ ಕರ್ನಾಟಕದ ಕರಾವಳಿಯ ಪ್ರಸ್ತಾವನೆ ಹಾಗು ಕನ್ನಡ ವಾಕ್ಯಗಳು ಕನ್ನಡಿಗರನ್ನು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತವೆ. ಆ ಕಥಾ ಹಂದರದ ಪ್ರಕಾರ ‘ಚಾರಿಷನ್’ ಎಂಬ ಒಬ್ಬಳು ಪುರಾತನ ಗ್ರೀಕ್ ನ ಬೆಡಗಿಯನ್ನು ಕರ್ನಾಟಕದ ಪಶ್ಚಿಮ ಕರಾವಳಿಯನ್ನು ಆಳುತ್ತಿದ್ದ ಒಬ್ಬ ರಾಜನಿಗೆ ಮಾರಾಟ ಮಾಡಲಾಗುತ್ತದೆ. ಅವಳನ್ನು ರಾಜನ ಸೆರೆಯಿಂದ ಬಿಡಿಸಿಕೊಂಡು ಹೋಗುವ ಸಲುವಾಗಿ ಗ್ರೀಕ್ ನ ಯುವ ನಾಯಕನೊಬ್ಬ ತನ್ನ ಸಹಚರರೊಂದಿಗೆ ಬಂದು ರಾಜನ ಸ್ನೇಹವನ್ನು ಸಂಪಾದನೆ ಮಾಡುತ್ತಾನೆ. ಉಪಾಯದಿಂದ ಹುಡುಗಿಯನ್ನ ಬಿಡಿಸಿಕೊಂಡು ಹೋಗಬೇಕಾಗಿದ್ದ ಅವನು ದೊರೆಗೆ ಹೆಂಡ ಕುಡಿಸಿ ಅವನಿಗೆ ಮತ್ತು ಬಂದಾಗ ಆ ಹುಡುಗಿಯನ್ನ ಕೊಂಡೊಯ್ಯುವ ಒಂದು ಪ್ರಸಂಗವಿದೆ. ಈ ಗ್ರೀಕ್ ನಾಟಕದಲ್ಲಿ ‘ಕೊಂಚ ಮಧು ಪಾತ್ರಕ್ಕೆ ಹಾಕಿ’ ಅಲ್ಲದೆ ‘ಪಾನಂ ಬೆರೆತ್ತಿ ಕಟ್ಟಿ ಮಧುವಂ ಬೆರೆತ್ತುವೆನು’ ಹೀಗೆ ಅನೇಕ ಕನ್ನಡ ಸಂಭಾಷಣೆಗಳೂ ಇವೆ. ಗ್ರೀಕ್, ಈಜಿಪ್ಟ್, ಕರ್ನಾಟಕ ಇವುಗಳೆಲ್ಲಾ ಭೌಗೋಳಿಕವಾಗಿ ಅಜಗಜಾಂತರ ಅನ್ನುವಷ್ಟು ದೂರದಲ್ಲಿದ್ದರೂ ಸಂಸ್ಕೃತಿ, ಕಲೆಗಳಲ್ಲಿ ಬೆಸೆದುಕೊಂಡಿದ್ದು ನಮಗೆ ಕಂಡುಬರುತ್ತದೆ. ಆ ಮೂಲಕ ಗ್ರೀಕರೊಂದಿಗೆ ಕನ್ನಡಿಗರು ಬಹಳ ಹಿಂದೆಯಿಂದಲೇ ವ್ಯಾಪಾರ-ವ್ಯಾವಹಾರಗಳನ್ನು ಇಟ್ಟುಕೊಂಡಿದ್ದರು ಎನ್ನುವುದು ತಿಳಿದುಬರುತ್ತದೆ. ಇವುಗಳೆಲ್ಲಾ ನಮಗೆ ಈವತ್ತಿನವರೆಗೆ ದೊರೆತಿರುವ ಶಾಸನಗಳ, ಗ್ರಂಥಗಳ ಆಧಾರಿತ ಕನ್ನಡ ಭಾಷೆಯ ಇತಿಹಾಸದ ಮಾಹಿತಿಗಳು. ಆದರೆ ಕನ್ನಡ ಭಾಷೆ ನಿಜವಾಗಿಯೂ ಎಷ್ಟು ವರ್ಷಗಳಿಂದ ಚಾಲ್ತಿಯಲ್ಲಿದೆ ಅನ್ನುವುದನ್ನು ಕರಾರುವಕ್ಕಾಗಿ ಹೇಳುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಅದಕ್ಕೆ ನಮಗೆ ಪುರಾವೆಯಾಗಿ ದೊರೆಯುವುದು ‘ಕುಮುದೇಂದು’ ಎನ್ನುವ ಕನ್ನಡದ ಮುನಿಯೊಬ್ಬರು ಬರೆದ ‘ಸಿರಿಭೂವಲಯ’ ಎನ್ನುವ ಗ್ರಂಥ. ಆ ಗ್ರಂಥದಲ್ಲಿ ಕನ್ನಡ ಭಾಷೆ ವೇದಗಳ ಕಾಲದಿಂದಲೂ ಒಂದು ಗುಪ್ತ ಭಾಷೆಯಾಗಿ ಚಾಲ್ತಿಯಲ್ಲಿತ್ತು ಎನ್ನುವುದನ್ನು ಹೇಳಲಾಗಿದೆ. ಆದ ಕಾರಣದಿಂದ ಕನ್ನಡದ ಪ್ರಾಚೀನತೆಯನ್ನು ನಿರ್ದಿಷ್ಟವಾಗಿ ಇಂತಿಷ್ಟೇ ಎಂದು ಹೇಳುವುದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ, ಆದರೆ ಅದು ಖಂಡಿತವಾಗಿಯೂ ೨೫೦೦ ವರ್ಷಗಳಿಗಿಂತಾ ಇನ್ನೂ ಹಳೆಯದು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಹಳೆತನವನ್ನು ತಿಳಿಯ ಹೊರಟ ಪ್ರೊಫೆಸರ್ ಮಳವಳ್ಳಿ ನಂಜುಂಡಸ್ವಾಮಿಯವರು ಕನ್ನಡಕ್ಕೆ ಹತ್ತು ಸಾವಿರ ವರ್ಷಗಳ ಇತಿಹಾಸವಿದೆ ಎನ್ನುವುದನ್ನ ಅವರ ಸಂಶೋಧನೆಗಳ ಮೂಲಕ ಕಂಡುಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರಪಂಚದಲ್ಲಿ ಅತಿ ಪ್ರಾಚೀನ ನಾಗರಿಕತೆ ಎನ್ನಿಸಿಕೊಂಡಿದ್ದ ಸುಮೇರಿಯನ್ ನಾಗರಿಕತೆ ಇಂದಿನ ಇರಾನ್ ದೇಶದ ಬಾಗ್ದಾದ್ ನಲ್ಲಿ ತಲೆಯೆತ್ತಿ ಆರು ಸಾವಿರ ವರ್ಷಗಳ ಹಿಂದೆ ಅಳಿದುಹೋಗಿದೆ. ಆದರೆ ಅಲ್ಲಿನ ಭಾಷೆಯಾದ ಸುಮೇರ್ ನಲ್ಲಿ ‘ಊರು, ಉರಿ, ಐದು’ ಹೀಗೆ ಅಪ್ಪಟ ಕನ್ನಡದ ಪದಗಳಿವೆ ಎನ್ನುವುದನ್ನ ಅವರು ಪತ್ತೆ ಮಾಡಿದ್ದಾರೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆದು ಈ ವಿಚಾರ ವೈಜ್ಞಾನಿಕವಾಗಿ ಸಾಬೀತಾದರೆ ಕನ್ನಡಿಗರು ಜಗತ್ತಿನಲ್ಲಿ ಅತೀ ಪ್ರಾಚೀನ ಜನರು ಎನ್ನುವ ಮನ್ನಣೆಗೆ ಪಾತ್ರರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಹುಷಃ ಭಾಷೆಯ ಕುರಿತು ಇಂತಹ ಘನ ಇತಿಹಾಸವನ್ನ ಎದೆ ತಟ್ಟಿ ಹೇಳಿಕೊಳ್ಳುವುದಕ್ಕೆ ಬಹಳಷ್ಟು ಭಾಷಿಕರಿಗೆ ಸಾಧ್ಯವಾಗುವುದಿಲ್ಲ. ಈವತ್ತಿನ ಉತ್ತರ ಭಾರತದಲ್ಲಿ ಕೆಲವು ಶತಮಾನಗಳ ಹಿಂದೆ ಮಾತನಾಡುತ್ತಿದ್ದ ಭಾಷೆಯೇ ಬೇರೆ, ಇಂದು ಮಾತನಾಡುತ್ತಿರುವ ಭಾಷೆಯೇ ಬೇರೆ. ಆದರೆ ಕನ್ನಡಿಗರು ಅಂದಿನಿಂದ ಇಂದಿನವರೆಗೂ ಕನ್ನಡದ ಘಮಲಿನ ಸಾನಿಹ್ಯ ಬಿಟ್ಟು ಅತ್ತಿತ್ತ ಸುಳಿದಿಲ್ಲ. ನಾವು ಈವತ್ತಿನವರೆಗೂ ನಮ್ಮ ಭಾಷೆಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಿ ಕೊಂಡು ಬಂದಿದ್ದೇವೆ ಹಾಗೂ ಡಿಜಿಟಲ್ ಯುಗಮಾನದಲ್ಲೂ ನಿಲ್ಲದೆ ಹಾಗೆ ಸಾಗಲಿ ಎಂದು ಆಶಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ. ಇಷ್ಟೆಲ್ಲಾ ಕನ್ನಡ ಭಾಷೆಯ ಇತಿಹಾಸವನ್ನು ತಿಳಿದುಕೊಂಡ ಮೇಲಾದರೂ ನಮ್ಮ ನಡುವಿನ ಕನ್ನಡ ಭಾಷೆ ಬಳಸುವಾಗ ಹಿಂದು-ಮುಂದು ನೋಡುವ ಕೆಲವು ಕನ್ನಡಿಗರು ಬದಲಾದರೆ ಈ ಲೇಖನಕ್ಕೊಂದು ಅರ್ಥ ದೊರೆಯುತ್ತದೆ ಹಾಗು ಆ ಮೂಲಕ ಈ ಲೇಖನ ಪರಿಪೂರ್ಣವಾಗುತ್ತದೆ.

Related posts

ಕರ್ನಾಟಕ ನೈಸರ್ಗಿಕ ಸಂಪತ್ತಿನ ಬಗ್ಗೆ ವಿಸ್ಮಯಕಾರಿ ಮಾಹಿತಿ

ಇದು ಕನ್ನಡ ನಾಡಿನ ಪ್ರಾಚೀನತೆ

ಕನ್ನಡ ನಾಡನ್ನು ಚಿನ್ನದ ನಾಡು ಶ್ರೀಗಂಧದ ಬೀಡು ಎಂದೇಕೆ ಕರೆಯುತ್ತಾರೆ