ಮನೆ ಸುದ್ದಿ ಕನ್ನಡ ನಾಡನ್ನು ಚಿನ್ನದ ನಾಡು ಶ್ರೀಗಂಧದ ಬೀಡು ಎಂದೇಕೆ ಕರೆಯುತ್ತಾರೆ

ಕನ್ನಡ ನಾಡನ್ನು ಚಿನ್ನದ ನಾಡು ಶ್ರೀಗಂಧದ ಬೀಡು ಎಂದೇಕೆ ಕರೆಯುತ್ತಾರೆ

ಮೂಲಕ Arivu Technologies
0 ಕಾಮೆಂಟ್‌ಗಳು 7 ವೀಕ್ಷಣೆಗಳು
A+A-
ಮರುಹೊಂದಿಸಿ

ಕನ್ನಡ ನಾಡು ಚಿನ್ನದ ನಾಡು, ಶ್ರೀಗಂಧದ ಬೀಡು ಎಂದೆಲ್ಲಾ ಕೇಳಿಕೊಂಡು ಬೆಳೆದ ಕನ್ನಡದ ಮಕ್ಕಳು ಎಂದಾದದರೂ ಅದೇಕೆ ಹೀಗೆ ಎಂಬ ಯೋಚನೆಯಲ್ಲಿ ತೊಡಗಿಕೊಂಡಿದ್ದಾರೋ ಇಲ್ಲವೋ ತಿಳಿದಿಲ್ಲ. ಕನ್ನಡ ನಾಡಿನಲ್ಲಿ ನೈಸರ್ಗಿಕವಾಗಿ ದೊರೆಯುವ ಚಿನ್ನ ಹಾಗು ಶ್ರೀಗಂಧ ಕನ್ನಡ ನಾಡನ್ನು ಭಾರತದ ಇತರ ರಾಜ್ಯಗಳಿಗಿಂತ ವಿಶೇಷ ಸ್ಥಾನಕ್ಕೆ ಕೊಂಡೊಯ್ದು ನಿಲ್ಲಿಸಿವೆ. ಆದ ಕಾರಣಕ್ಕೆ ಕನ್ನಡ ನಾಡನ್ನು ನಮ್ಮ ಕವಿಗಳು ಚಿನ್ನದ ನಾಡು -ಶ್ರೀಗಂಧದ ಬೀಡು ಎಂದು ಹಾದಿ ಹೊಗಳಿದ್ದಾರೆ ಹೊರತು ಬರೀ ಮುಖಸ್ತುತಿಗಲ್ಲ ಎನ್ನುವುದು ಇಂದಿನ ಕನ್ನಡದ ಮಕ್ಕಳಿಗೆ ಅರಿವಾಗಬೇಕಾಗಿದೆ. ಕರ್ನಾಟಕ ಈ ಚಿನ್ನದ ವಿಷಯದಲ್ಲಿ ಭಾರತ ದೇಶದ ಒಂದು ಕೌತುಕ ಎಂದರೂ ಅತಿಶಯೋಕ್ತಿ ಆಗಲಾರದು. ಭಾರತದಲ್ಲಿ ಚಿನ್ನದ ಇತಿಹಾಸದ ಬಗ್ಗೆ ನಮಗೆ ಉಲ್ಲೇಖ ದೊರೆಯುವುದು ಸಿಂಧೂ ನಾಗರೀಕತೆಯ ಕಾಲಘಟ್ಟದಿಂದ. ಪುರಾತತ್ವ ಇಲಾಖೆ ಹರಪ್ಪ ಮತ್ತು ಮೆಹಂಜೋದಾರೊ ಪುರಾತನ ಪಟ್ಟಣಗಳ ಸ್ಥಳದಲ್ಲಿ ಉತ್ಖನನ ಕೈಗೊಂಡ ಸಂಧರ್ಭದಲ್ಲಿ ಅಲ್ಲಿ ಪೂರ್ವ ಕಾಲದ ಚಿನ್ನದ ಆಭರಣಗಳು ದೊರೆಯುತ್ತವೆ. ಆ ಚಿನ್ನದ ಆಭರಣಗಳನ್ನು ಒರೆಗೆ ಹಚ್ಚಿ ನೋಡಿ ಅದರಲ್ಲಿರುವ ಕಲ್ಮಶದ ಪ್ರಮಾಣವನ್ನು ಅಳೆದ ವಿಜ್ಞಾನಿಗಳು ಅಷ್ಟು ಕಲ್ಮಶದೊಂದಿಗೆ ಚಿನ್ನ ಸಿಗುವ ಸ್ಥಳದಿಂದ ಗಣಿಗಾರಿಕೆ ಮಾಡಿ ತೆಗೆದ ಚಿನ್ನ ಅದು ಎಂದು ದೃಡೀಕರಿಸಿದರು. ವಿಜ್ಞಾನಿಗಳು ಆ ಅಧ್ಯಯನದ ನಂತರ ಆ ಚಿನ್ನದ ಗಣಿಗಾರಿಕೆ ನಡೆದ ಸ್ಥಳದೆಡೆಗೆ ಕೈ ತೋರಿದರು, ಅದು ನಮ್ಮ ಕರ್ನಾಟಕದ ಕೋಲಾರ ಚಿನ್ನದ ಗಣಿಯಿಂದ ತೆಗೆದ ಚಿನ್ನವಾಗಿತ್ತು. ಅವರ ಅಧ್ಯಯನದ ಪ್ರಕಾರ ಕೋಲಾರ ಚಿನ್ನದ ಗಣಿಯಲ್ಲಿ ದೊರೆಯುವ ಚಿನ್ನದಲ್ಲಿ ಶೇ.೧೧ ರಷ್ಟು ಬೆಳ್ಳಿಯ ಪ್ರಮಾಣ ಇತ್ತು. ಸಿಂಧೂ ನಾಗರೀಕತೆ ಉತ್ತುಂಗದಲ್ಲಿದ್ದ ಕಾಲಕ್ಕೆ ಇಲ್ಲಿ ಬದುಕಿದ್ದವರಿಗೆ ಚಿನ್ನದ ಗಣಿಗಾರಿಕೆ ಮಾಡಲು ಹಾಗು ಅದರಿಂದ ಆಭರಣಗಳನ್ನು ತಯಾರು ಮಾಡಲು ಚೆನ್ನಾಗಿ ಅರಿವಿತ್ತು ಎಂಬುದೂ ಆ ಮೂಲಕ ಸಾಬೀತಾಯಿತು. ಸಿಂಧೂ ನಾಗರೀಕತೆ ಉತ್ತುಂಗದಲ್ಲಿದ್ದದ್ದು ಕ್ರಿಸ್ತ ಪೂರ್ವ ೩೩೦೦ ರಿಂದ ಕ್ರಿಸ್ತ ಪೂರ್ವ ೧೩೦೦ರ ವರೆಗೆ ಈಗಿನ ಪಾಕಿಸ್ತಾನದ ಸಿಂಧ್, ಬಲೂಚಿಸ್ತಾನ, ಪಂಜಾಬ್ ಪ್ರಾಂತ್ಯಗಳಲ್ಲದೆ ಭಾರತ ಹಾಗು ಅಫ್ಘಾನಿಸ್ತಾನದಲ್ಲಿ. ಕನ್ನಡ ಸೀಮೆಯ ಜನ ಇಂದಿಗೆ ಸುಮಾರು ೫೦೦೦ ವರ್ಷಗಳ ಹಿಂದೆಯೇ ಚಿನ್ನದ ಗಣಿಗಾರಿಕೆಯನ್ನು ಕರತಲಾಮಲಕ ಮಾಡಿಕೊಂಡಿದ್ದರು, ಇದು ಈ ಸ್ಥಳ ಮಹಿಮೆ ಎಂದರೂ ಉತ್ಪ್ರೇಕ್ಷೆ ಎನಿಸದು. ಸಿಂಧೂ ನಾಗರೀಕತೆಯ ಕಾಲದಲ್ಲೇ ಬಳಕೆಯಲ್ಲಿದ್ದ ಈ ಕೋಲಾರ ಚಿನ್ನದ ಗಣಿ ಮುಂದೆ ಗುಪ್ತರು,ತಲಕಾಡು ಗಂಗರು, ಚೋಳರು, ಹೊಯ್ಸಳರು, ಕರ್ನಾಟಕ ಸಾಮ್ರಾಜ್ಯ, ಮೈಸೂರಿನ ಒಡೆಯರು ಹಾಗು ಬ್ರಿಟೀಷರ ಕಾಲದಲ್ಲೂ ಮುಂದುವರೆದಿದ್ದು ವಿಶೇಷ. ನಮ್ಮ ಕೋಲಾರದ ಚಿನ್ನದ ಗಣಿಯನ್ನು ಬಳಸಿಕೊಂಡಷ್ಟು ಸುಧೀರ್ಘವಾಗಿ ಇನ್ನಾವುದೇ ಚಿನ್ನದ ಗಣಿಯನ್ನು ಬಳಸಿಕೊಂಡ ಉದಾಹರಣೆಗಳು ನಮಗೆ ದೊರೆಯುವುದು ದುಸ್ತರ. ಬ್ರಿಟೀಷರು ಕೋಲಾರ ಚಿನ್ನದ ಗಣಿಯಿಂದ ಹೊರತೆಗೆದ ಚಿನ್ನದ ಪ್ರಮಾಣದ ಅಂಕಿ-ಅಂಶಗಳನ್ನು ಗಮನಿಸಿದರೆ ನಾವು ಒಂದು ಕ್ಷಣ ಅವಾಕ್ಕಾಗುವುದು ಖಂಡಿತಾ. ಅಲ್ಲಿಂದ ತೆಗೆದ ಚಿನ್ನದ ಪ್ರಮಾಣ ಬರೋಬ್ಬರಿ ೮೦೦ ಟನ್, ಅಂದರೆ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಯಷ್ಟು ಚಿನ್ನ. ಬರಿಯ ೧೫೦ ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟೀಷರೇ ಈ ಪರಿ ಚಿನ್ನ ಹೊರತೆಗೆದಿರುವಾಗ ಸಿಂಧೂ ನಾಗರೀಕತೆಯ ಕಾಲದಿಂದ ಇನ್ನೆಷ್ಟು ತೆಗೆದಿರಬೇಕು ಎನ್ನುವುದು ನಿಜಕ್ಕೂ ಊಹೆಗೆ ನಿಲುಕದ್ದು. ಕೋಲಾರದಿಂದ ಹೊರತೆಗೆದಿರುವ ಅಷ್ಟೂ ಚಿನ್ನ ಆಭರಣ ರೂಪದಲ್ಲಿಯೋ, ಬಿಸ್ಕತ್ ರೂಪದಲ್ಲಿಯೋ, ಔಷದ ರೂಪದಲ್ಲಿಯೋ ಪ್ರಪಂಚದ ಯಾವ ಯಾವ ಮೂಲೆಯವರೆಗೂ ತಲುಪಿದೆಯೋ ಹೇಳುವುದು ಅಸಾಧ್ಯ. ನಮ್ಮ ಕರ್ನಾಟಕದಲ್ಲಿ ಕೋಲಾರ ಮಾತ್ರವಲ್ಲದೆ ರಾಯಚೂರಿನ ಹಟ್ಟಿ ಚಿನ್ನದ ಗಣಿಯೂ ಕೂಡ ಕ್ರಿಸ್ತ ಪೂರ್ವದಲ್ಲಿ ಆಡಳಿತ ಮಾಡುತ್ತಿದ್ದ ಸಾಮ್ರಾಟ ಅಶೋಕನ ಕಾಲದಿಂದ ಚಾಲ್ತಿಯಲ್ಲಿದೆ ಎನ್ನುವುದು ಅನೇಕರ ವಾದ. ಅದನ್ನೂ ಪರಿಗಣಿಸಿಕೊಂಡರೆ ನಮ್ಮ ಕೋಲಾರ ಹಾಗು ಹಟ್ಟಿ ಚಿನ್ನದ ಗಣಿಗಳು ಸತತ ೫೦೦೦ ವರ್ಷಗಳ ಕಾಲ ಭಾರತದ ಸರಿಸುಮಾರು ೮೫.೯೦ ಶೇಕಡಾ ಚಿನ್ನದ ಬೇಡಿಕೆಯನ್ನು ಪೂರೈಸುತ್ತಿದ್ದುದು ಕಂಡುಬರುತ್ತದೆ. ಕೋಲಾರ ಹಾಗು ಹಟ್ಟಿ ಚಿನ್ನದ ಗಣಿಗಳನ್ನು ಹೊರತು ಪಡಿಸಿ ಭಾರತದಲ್ಲಿ ಇನ್ನು ಕೆಲವು ಚಿನ್ನದ ಗಣಿಗಳು ಹಾಗು ನಿಕ್ಷೇಪಗಳು ಇವೆ. ನಮ್ಮ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಮಗಿರಿ ಚಿನ್ನದ ಗಣಿ, ಜಾರ್ಖಂಡ್ ರಾಜ್ಯದ ಲಾವಾ ಚಿನ್ನದ ಗಣಿಗಳು ಈಗಾಗಲೇ ಚಿನ್ನದ ಗಣಿಗಾರಿಕೆಯಲ್ಲಿ ತೊಡಗಿವೆ. ಇತ್ತೀಚಿಗೆ ಉತ್ತರ ಪ್ರದೇಶದ ಸೋನ್ ಭದ್ರಾ ಎಂಬಲ್ಲಿ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಲಾಗಿದೆ. ಆದರೂ ಅಲ್ಲಿ ದೊರೆಯುವ ಚಿನ್ನದ ಪ್ರಮಾಣ ಕೋಲಾರದ ಚಿನ್ನದ ಪ್ರಮಾಣಕ್ಕೆ ಸರಿಸಾಟಿಯಾಗಲಾರದು ಎನ್ನುವುದು ಇದೀಗ ಅಧ್ಯಯನಗಳ ಮುಖಾಂತರ ಕಂಡುಕೊಂಡಿರುವ ಸತ್ಯ. ಇನ್ನು ನಮ್ಮ ಕರ್ನಾಟಕದಲ್ಲೇ ಬೆಂಗಳೂರು, ಹಾಸನ, ಶಿವಮೊಗ್ಗದ ಶಿಕಾರಿಪುರದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪಗಳಿರುವುದನ್ನು ಭೂಗರ್ಭ ಅಧ್ಯಯನಕಾರರು ಪತ್ತೆ ಮಾಡಿದ್ದಾರೆ. ಕರ್ನಾಟಕವನ್ನು ಚಿನ್ನದ ನಾಡು ಎಂದು ಕರೆಯುದಕ್ಕೆ ಇಷ್ಟು ಆಧಾರಗಳು ಸಾಕಲ್ಲವೇ !. ಇನ್ನು ಕರ್ನಾಟಕವನ್ನ ಶ್ರೀಗಂಧದ ಬೀಡು ಎನ್ನುವ ಮತ್ತೊಂದು ವಿಶೇಷಣದಿಂದ ಕರೆಯುವುದೇಕೆ ಎಂದು ತಿಳಿದುಕೊಳ್ಳ ಹೊರಟರೆ ಅಲ್ಲಿ ನಮಗೆ ಕರ್ನಾಟಕದ ಶ್ರೀಗಂಧದ ಸಿರಿವಂತಿಕೆ ತೆರೆದುಕೊಳ್ಳುತ್ತದೆ. ಕನ್ನಡ ನಾಡಿನ ಕವಿಪುಂಗವರು, ಪ್ರವಾಸಿಗರು, ಶಾಸ್ತ್ರಕಾರರು, ಜ್ಞಾನಿಗಳು, ಆಯುರ್ವೇದ ತಜ್ಞರು, ಸುಗಂಧ ಪ್ರೇಮಿಗಳು ನಮಗೆ ಸಾವಿರಾರು ವರ್ಷಗಳಿಂದ ಶ್ರೀಗಂಧದ ಮಹತ್ವವನ್ನು ತಿಳಿಸುತ್ತಾಳೆ ಬಂದಿದ್ದಾರೆ. ಶ್ರೀಗಂಧದ ಕಂಪು ಹರಡದ ಯಾವ ಉತ್ಸವ, ಆಚರಣೆಗಳು ಕರ್ನಾಟಕದಲ್ಲಿರಲಿಲ್ಲ ಎಂದರೆ ಶ್ರೀಗಂಧ ಕನ್ನಡಿಗರ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿತ್ತು ಎನ್ನುವುದು ನಮಗೆ ಮನವರಿಕೆಯಾಗುತ್ತದೆ. ಈ ಶ್ರೀಗಂಧ ಪ್ರಪಂಚದ ಎರಡನೇ ಅತಿ ದುಬಾರಿ ಮರ. ಪ್ರಪಂಚದ ಅತ್ಯಂತ ದುಬಾರಿ ಮರವಾಗಿ ಆಫ್ರಿಕನ್ ಬ್ಲಾಕ್ ವುಡ್ ಗುರುತಿಸಿಕೊಂಡಿದೆ. ತನ್ನ ಸುವಾಸನೆಯುಕ್ತ ಕಂಪನ್ನು ದಶಕಗಟ್ಟಲೆ ಹಿಡಿದಿಟ್ಟುಕೊಳ್ಳುವ ಶಕ್ತಿ ಶ್ರೀಗಂಧಕ್ಕೆ ಇರುವ ಕಾರಣದಿಂದಲೇ ಅದನ್ನು ಪರಂಪರಾಗತವಾಗಿ ಬಳಸಿಕೊಂಡು ಬರಲಾಗುತ್ತಿದೆ. ಶ್ರೀಗಂಧ ಭಾರತದಲ್ಲಿ ಮೈಸೂರು, ಪಶ್ಚಿಮ ಘಟ್ಟ ಪ್ರದೇಶ, ಸೇಲಂ, ಚಿತ್ತೂರು, ಕರ್ನೂಲು ಪ್ರದೇಶಗಳಲ್ಲಿ ಬೆಳೆಯುತ್ತದೆ, ಭಾರತದ ಹೊರಗೆ ಶ್ರೀಲಂಕಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಮುಂತಾದ ಕಡೆಯೂ ಶ್ರೀಗಂಧ ನೈಸರ್ಗಿಕವಾಗಿ ಬೆಳೆಯುತ್ತದೆ. ಆದರೆ ಮೈಸೂರು ಪ್ರಾಂತ್ಯದಲ್ಲಿ ಬೆಳೆಯುವ ಶ್ರೀಗಂಧಕ್ಕೆ ಅತ್ಯುತ್ತಮ ಗುಣಮಟ್ಟದ ಹಣೆಪಟ್ಟಿ ಇರುವುದು ಕರ್ನಾಟಕವನ್ನು ಶ್ರೀಗಂಧ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಇರುವಂತೆ ನೋಡಿಕೊಂಡಿದೆ. ಅಷ್ಟಲ್ಲದೇ ನಮ್ಮ ಕರ್ನಾಟಕದ ರಾಜ್ಯ ವೃಕ್ಷ ಕೂಡ ಈ ಶ್ರೀಗಂಧವೇ ಆಗಿದೆ. ಈ ಎಲ್ಲ ಕಾರಣಗಳಿಗೆ ಕನ್ನಡ ನಾಡನ್ನು ಶ್ರೀಗಂಧದ ಬೀಡು ಎಂಬ ವಿಶೇಷಣವನ್ನು ಹಲವರು ನೀಡಿದ್ದು.

ನಿಮಗೂ ಇಷ್ಟವಾಗಬಹುದು

ಕಾಮೆಂಟ್ ಬಿಡಿ

ಕನ್ನಡದ ಕಣ್ಮಣಿಯಾಗಲು ಚಂದಾದಾರರಾಗಿ

ಕನ್ನಡದ ಇತಿಹಾಸ, ಸಂಸ್ಕೃತಿ, ಮತ್ತು ಪರಂಪರೆಯನ್ನು ಕಾದುಹಿಡಿಯಲು, ಹಾಗೂ ಹೊಸ ಟೀಶರ್ಟ್ ಡಿಸೈನ್‌ಗಳು ಮತ್ತು ವಿಶೇಷ ಆಫರ್‌ಗಳ ಮಾಹಿತಿಗಾಗಿ ಚಂದಾದಾರರಾಗಿ

ಫೋನ್ : +91 9380200155

ಇಮೇಲ್ : karnatabala@gmail.com
ವಿಳಾಸ: #೧೦೩೮, ೭ನೇ ಹಂತ, ಬನಶಂಕರಿ ೬ನೇ ಹಂತ ಬಡಾವಣೆ, ಬೆಂಗಳೂರು ದಕ್ಷಿಣ, ಬೆಂಗಳೂರು- ೫೬೦೦೬೦

@2025 – All Right Reserved. Designed and Developed by Catalyst Digisolutions
Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00