ಕನ್ನಡಿಗರು ಎಂದಾದರೂ ಒಂದು ಕಡೆ ಸೇರಿ ಕನ್ನಡದ ಬಗ್ಗೆ ಮಾತನಾಡುವಾಗ ಕದಂಬರನ್ನು ನೆನಪಿಸಿಕೊಳ್ಳುವುದನ್ನು ಮರೆಯುವಂತಿಲ್ಲ. ಕದಂಬ ಸಾಮ್ರಾಜ್ಯವೇ ಕನ್ನಡದ ಮೊದಲ ಸಾಮ್ರಾಜ್ಯ ಎಂದು ಹೆಚ್ಚಿನ ಜನರ ನಂಬಿಕೆ ಆಗಿದೆ. ಹಾಗಿದ್ದರೆ ಕದಂಬರಿಗಿಂತಲೂ ಮೊದಲು ಕನ್ನಡ ಸಾಮ್ರಾಜ್ಯಗಳಾಗಲಿ, ರಾಜ ಮನೆತನಗಳಾಗಲಿ, ಸಾಮಂತ ರಾಜರಾಗಲಿ ಇರಲಿಲ್ಲವೇ? ಎನ್ನುವುದೊಂದು ಪ್ರಶ್ನೆ ಸಣ್ಣಗೆ ನಮ್ಮ ಮನಸ್ಸಿನಲ್ಲಿ ಮೂಲೆಯಲ್ಲಿ ಮೊಳಕೆಯೊಡೆಯುತ್ತದೆ. ಅದಕ್ಕೆ ಖಡಕ್ಕಾದ ಉತ್ತರವಿದು ಎನ್ನಲಾಗದಿದ್ದರೂ ಆ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಸಣ್ಣ ಪ್ರಯತ್ನವಾಗಿ ಈ ಲೇಖನ. ಕನ್ನಡದ ಅಧೀಕೃತ ಸಾಮ್ರಾಜ್ಯ ಕದಂಬ ಸಾಮ್ರಾಜ್ಯಕ್ಕಿಂತ ಹಿಂದೆ ಕ್ರಿಪೂ ೫ನೇ ಶತಮಾನದಿಂದ ಕ್ರಿಪೂ ೩ನೇ ಶತಮಾನದವರೆಗೆ ಕರ್ನಾಟಕ ನಂದರ ಹಾಗೂ ಮೌರ್ಯರ ಆಳ್ವಿಕೆಗೆ ಒಳಪಟ್ಟಿದ್ದಾಗಿದ್ದರೂ ಇಂದಿನ ಕರ್ನಾಟಕದ ಪ್ರದೇಶಗಳು ಅವರ ಗಡಿ ಭಾಗಗಳಾಗಿದ್ದವು. ಸಂಪೂರ್ಣ ದಖ್ಖನ್ ಪ್ರಸ್ತಭೂಮಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ನಂದರಿಗೂ, ಮೌರ್ಯರಿಗೂ ಅವಕಾಶವಾಗಿರಲಿಲ್ಲ. ಆದರೆ ಮೊಟ್ಟ ಮೊದಲ ಬಾರಿಗೆ ದಖ್ಖನ್ ಪ್ರಸ್ತಭೂಮಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಆಡಳಿತ ಮಾಡಿದ ಶ್ರೇಯ ಶಾತವಾಹನರಿಗೆ ಸಲ್ಲುತ್ತದೆ. ಈ ಶಾತವಾಹನರು ಹಿಂದೆ ಮೌರ್ಯ ಸಾಮ್ರಾಜ್ಯದ ಸಾಮಂತರಾಗಿದ್ದು, ಆ ವಂಶದಲ್ಲಿ ಜನಿಸಿದ ‘ಸಿಮುಖ’ನೆಂಬ ದೊರೆಯಿಂದ ಸ್ವತಂತ್ರ ಸಾಮ್ರಾಜ್ಯವಾಗಿ ಹೊರಹೊಮ್ಮುತ್ತಾರೆ. ಕಾಲಕ್ರಮೇಣ ಪ್ರಬಲರಾಗುತ್ತಾ ಸಾಗುವ ಶಾತವಾಹನರು ಕ್ರಿಪೂ ೨೩೫ರಿಂದ ಕ್ರಿಪೂ ೨೨೫ರವರೆಗೆ ಇಂದಿನ ಮಹಾರಾಷ್ಟ್ರದ ಪೈಠಾಣ ಅಥವಾ ಪ್ರತಿಷ್ಠಾಣ ಹಾಗು ಆಂಧ್ರಪ್ರದೇಶದ ಅಮರಾವತಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಸುಮಾರು ೪೬೦ ವರ್ಷಗಳ ಸುದೀರ್ಘವಾದ ಆಡಳಿತ ನಡೆಸುತ್ತಾರೆ. ಇಂದಿನ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ ಗಡದ ಪ್ರದೇಶಗಳಲ್ಲೆಲ್ಲಾ ಆಳ್ವಿಕೆ ನಡೆಸಿದ ಇವರು ಕಲಾಪೋಷಕರು ಕೂಡ ಆಗಿರುತ್ತಾರೆ. ಸನಾತನ ಹಾಗೂ ಬೌದ್ಧ ಧರ್ಮಗಳೆರಡಕ್ಕೂ ಮನ್ನಣೆ ಕೊಟ್ಟ ಶಾತವಾಹನರ ಮೂಲದ ಬಗ್ಗೆ ಇಂದಿಗೂ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಶಾತವಾಹನರು ತೆಲುಗು ಮೂಲದವರು ಎಂದು ಪ್ರೊಫೆಸರ್.ವಿ.ಎ.ಸ್ಮಿತ್ ಹಾಗೂ ಬಂಡಾರ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರು ಕನ್ನಡದ ಮೂಲದವರು ಎಂದು ಕೆ.ಪಿ.ಜಯಸ್ವಾಲ್ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಇನ್ನು ಪ್ರೊಫೆಸರ್.ವಿ.ಎ.ಸ್ಮಿತ್ ಹಾಗೂ ಬಂಡಾರ್ಕರ್ ಅವರ ಪ್ರಕಾರ ಶಾತವಾಹನರ ನೆಲೆ ಶ್ರೀಕಾಕುಳಂ, ಕೃಷ್ಣಾ, ಗುಂಟೂರು ಹಾಗು ಪೈಠಾಣವಾಗಿದ್ದು, ಇವರ ನಾಣ್ಯಗಳು ಹಾಗು ಶಾಸನಗಳು ಇದಕ್ಕೆ ಪುರಾವೆ ಒದಗಿಸುತ್ತಿವೆ. ಸ್ಕಂದ ಪುರಾಣದಲ್ಲಿ ಇವರನ್ನು ಆಂಧ್ರರು ಎಂದು ಕರೆದಿರುವುದರಿಂದ ಇವರನ್ನು ತೆಲುಗು ಮೂಲದವರು ಎಂದು ಹೇಳಲಾಗಿದೆ. ಇನ್ನು ಕೆಲವು ವಿದ್ವಾಂಸರ ಪ್ರಕಾರ ಶಾತವಾಹನರ ಮೊದಮೊದಲಿನ ಅಂದರೆ ಕ್ರಿಪೂ ೧೦೦ರ ಸುಮಾರಿನ ಶಾಸನಗಳೆಲ್ಲ ಇಂದಿನ ಪಶ್ಚಿಮ ದಖ್ಖನ್ ನಲ್ಲಿ ದೊರೆತಿವೆ ಹಾಗು ಅವರ ಅತೀ ಹಳೆ ಶಾಸನ ಕ್ರಿಪೂ ೧೧೦ನೇ ಇಸವಿಯ ಸುಮಾರಿಗೆ ಬರೆಸಿರುವ ಶಾಸನ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಕನಗನ ಹಳ್ಳಿಯಲ್ಲಿ ದೊರೆತಿರುವುದರಿಂದ ಅವರು ಕನ್ನಡಿಗರೇ ಆಗಿರಬೇಕು ಎಂದು ಊಹೆ ಮಾಡಿದ್ದಾರೆ. ನಾವು ಇಲ್ಲಿ ಗಮನಿಸಬೇಕಿರುವ ಒಂದು ಮುಖ್ಯ ವಿಷಯ ಎಂದರೆ ಶಾತವಾಹನರ ಅತೀ ಹಳೆಯ ಶಾಸನಗಳು ಕ್ರಿಸ್ತಪೂರ್ವದಲ್ಲಿ ಬರೆಸಿರುವ ಶಾಸನಗಳಾಗಿದ್ದು ಅವುಗಳೆಲ್ಲಾ ಪಶ್ಚಿಮ ದಖ್ಖನ್ ನಲ್ಲೇ ದೊರೆತಿವೆ. ಆದರೆ ಅವರು ಕ್ರಿಸ್ತಶಕದಲ್ಲಿ ಬರೆಸಿರುವ ಶಾಸನಗಳು ಪೂರ್ವ ದಖ್ಖನ್ ನಲ್ಲಿ ದೊರೆತಿರುವುದನ್ನು ನಾವು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಶಾತವಾಹನರು ಕನ್ನಡದ ಮೂಲದವರು ಎಂದು ಊಹಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಶಾತವಾಹನರ ಮಾತೃಭಾಷೆಯ ಕುರಿತಾಗಿ ಇಂದಿಗೂ ಅನೇಕ ಊಹಾಪೋಹಗಳು ಚಾಲ್ತಿಯಲ್ಲಿವೆ, ಹಾಗಿದ್ದರೂ ಅವರು ಬರೆಸಿರುವ ಶಾಸನಗಳೆಲ್ಲಾ ಇರುವುದು ಪ್ರಾಕೃತ ಭಾಷೆಯಲ್ಲಿ ಹಾಗು ಬ್ರಾಹ್ಮಿಲಿಪಿಯಲ್ಲಿ. ಆ ಶಾಸನ ಪಾಠಗಳ ನಡುನಡುವೆ ನಾವು ಹಳೆಗನ್ನಡದ ಸಾಲುಗಳನ್ನು ಕಾಣಬಹುದಾಗಿದೆ. ಇದಿಷ್ಟು ಕನ್ನಡ ಸೀಮೆಯಲ್ಲಿ ಶಾತವಾಹನರ ಕಥೆಯಾದರೆ ಅವರದ್ದೇ ಸಾಮಂತರಾಗಿದ್ದ ಚುಟುಗಳು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಸ್ವತಂತ್ರಗೊಂಡು ಆಳ್ವಿಕೆ ನಡೆಸುತ್ತಾರೆ. ಕ್ರಿಸ್ತಪೂರ್ವ ೧ನೇ ಶತಮಾನದಿಂದ ಕ್ರಿಸ್ತಪೂರ್ವ ೩ನೇ ಶತಮಾನದವರೆಗೆ ಆಡಳಿತ ನಡೆಸಿದ ಚುಟುಗಳು ತಮ್ಮ ಆಳ್ವಿಕೆಯಲ್ಲಿ ಪ್ರಾಕೃತ ಭಾಷೆಯನ್ನು ಬಳಸಿದರೂ ಅವರೂ ಕನ್ನಡಿಗರೇ ಆಗಿದ್ದರೆಂದು ಹೆಚ್ಚಿನ ಎಲ್ಲಾ ವಿದ್ವಾಂಸರುಗಳು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಳೆಗನ್ನಡ ಸಂಪೂರ್ಣವಾಗಿ ಬೆಳವಣಿಗೆ ಆಗಿದ್ದು, ಕನ್ನಡಕ್ಕೆ ತನ್ನದೇ ಆದ ಲಿಪಿ ಬೆಳವಣಿಗೆ ಆಗಿದ್ದೂ ಕೂಡ ಈ ಸಮಯದಲ್ಲೇ ಎಂದು ಅನೇಕ ತಜ್ಞರು ಗುರುತಿಸಿದ್ದಾರೆ. ಚುಟುಗಳು ಮಾತ್ರ ಅಲ್ಲದೆ ಅವರ ಸಮಕಾಲೀನರಾದ ಬಾಣರು ಅಥವಾ ಬೃಹತ್ ಬಾಣರು ಇಂದಿನ ಕೋಲಾರ-ಚಿಕ್ಕಬಳ್ಳಾಪುರ ಪ್ರದೇಶಗಳನ್ನು ಆಳುತ್ತಿದ್ದ ಬಗ್ಗೆ ಹಾಗೂ ಈಗಿನ ಹಳೇ ಮೈಸೂರು ಭಾಗದಲ್ಲಿ ಪುನ್ನಾಟರು ಎಂಬ ರಾಜಮನೆತನಗಳು ಇದ್ದ ಬಗ್ಗೆ ನಮಗೆ ಮಾಹಿತಿ ದೊರೆಯುತ್ತದೆ. ಇವೆಲ್ಲ ಕನ್ನಡದ ಪ್ರಾಚೀನ ರಾಜಮನೆತನಗಳು ಅಥವಾ ಕದಂಬ ಪೂರ್ವ ರಾಜ ಮನೆತನಗಳು ಎನ್ನುವುದು ಇಲ್ಲಿ ವಿಶೇಷ. ಈ ರಾಜಮನೆತನಗಳನ್ನೆಲ್ಲಾ ಹೊರತು ಪಡಿಸಿದರೆ ಕರ್ನಾಟಕದ ದಕ್ಷಿಣ ಭಾಗ ಹಾಗು ತಮಿಳುನಾಡಿನ ಕೊಂಗು ನಾಡು ಪ್ರಾಂತ್ಯಗಳಲ್ಲಿ ಪ್ರಬಲರಾಗಿದ್ದ ಕಳಭ್ರರು ಎಂಬ ರಾಜ ಮನೆತನದ ಕುರಿತಾಗಿ ನಮಗೆ ಇತಿಹಾಸದ ಪುಟಗಳಿಂದ ಮಾಹಿತಿ ದೊರೆಯುತ್ತದೆ. ಕ್ರಿಶ ೨೭೫ – ೩೦೦ರ ಸಮಯದಲ್ಲಿ ತಮಿಳುನಾಡು ಹಾಗು ಕೇರಳದ ಮೇಲೆ ವಿಜಯ ಯಾತ್ರೆ ಮಾಡಿ, ತಮ್ಮ ಪತಾಕೆಯನ್ನ ಅಲ್ಲಿ ಹಾರಿಸಿದ್ದ ಕನ್ನಡಿಗರು ಈ ಕಳಭ್ರರು. ಇವರು ಸರಿ ಸುಮಾರು ೩೦೦ ವರ್ಷಗಳ ಕಾಲ ತಮಿಳುನಾಡು, ಕೇರಳ ಪ್ರದೇಶಗಳನ್ನು ಆಳ್ವಿಕೆ ಮಾಡಿದ್ದರೆಂದು ತಿಳಿದು ಬಂದರೂ ಅವರ ಕಾಲದಲ್ಲಿ ನಡೆದಿದ್ದ ಯುದ್ಧಗಳ ಬಗೆಗಾಗಲಿ, ಗುಡಿ-ಗೋಪುರಗಳ ನಿರ್ಮಾಣದ ಬಗೆಗಾಗಲಿ ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ. ಈ ಕಳಭ್ರರು ಇಂದಿನ ಬೆಂಗಳೂರು-ಚಿತ್ತೂರು ಪ್ರದೇಶದಿಂದ ವಲಸೆ ಬಂದು ತಮಿಳುನಾಡಿನಲ್ಲಿ ಅಧಿಕಾರ ಸ್ಥಾಪಿಸಿದ್ದರು ಎಂದು ವಿದ್ವಾಂಸರಾದ ಆರ್.ನರಸಿಂಹಾಚಾರ್ಯ ಹಾಗು ವಿ.ವೆಂಕಯ್ಯನವರು ಕ್ರಿಶ ಸುಮಾರು ೮೦೦ನೇ ಇಸವಿಯ ತಮಿಳಿನ ವೆಲ್ವಿಕುಡಿ ಶಾಸನವನ್ನು ಓದಿ ಹೇಳಿದ್ದಾರೆ. ಇಂದಿನ ಶ್ರವಣಬೆಳಗೊಳದ ಚಿಕ್ಕ ಬೆಟ್ಟವನ್ನು ಪ್ರಾಚೀನ ಶಾಸನಗಳಲ್ಲಿ ಕಳಬಪ್ಪ ಅಥವಾ ಕಳಬಪ್ಪ ನಾಡು ಎಂದು ಕರೆಯುತ್ತಿದ್ದ ಬಗ್ಗೆ ಉಲ್ಲೇಖಗಳು ನಮಗೆ ದೊರೆಯುತ್ತವೆ ಹಾಗು ಇಂದಿನ ಬೆಂಗಳೂರು-ಕೋಲಾರ ಪ್ರಾಂತ್ಯವನ್ನು ಕಳವರ ನಾಡು ಎಂದು ಆಗ ಕರೆಯುತ್ತಿದ್ದುದರಿಂದ ಈ ಕಳಭ್ರರು ಕನ್ನಡಿಗರೇ ಆಗಿರಬೇಕು ಎನ್ನುವುದು ಮತ್ತಷ್ಟು ವಿದ್ವಾಂಸರ ವಾದ. ಇದು ನಮ್ಮ ಕರ್ನಾಟಕದ ಹಾಗೂ ಕನ್ನಡಿಗರ ಕದಂಬ ಪೂರ್ವದ ಇತಿಹಾಸ. ಕದಂಬರು ಆಳುವುದಕ್ಕೂ ಮೊದಲೇ ಶಾತವಾಹನರು, ಚುಟುಗಳು, ಬಾಣರು, ಪುನ್ನಾಟರು ಕರ್ನಾಟಕವನ್ನು ಆಡಳಿತ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿಂದ ವಲಸೆ ಹೋದ ಕನ್ನಡಿಗರು ಕೂಡಾ ನೆರೆಯ ತಮಿಳುನಾಡು ಹಾಗೂ ಕೇರಳವನ್ನು ಆಡಳಿತ ಮಾಡಿ ಕನ್ನಡ ಸಂಸ್ಕೃತಿಯೊಂದು ದಕ್ಷಿಣ ಭಾರತದಾದ್ಯಂತ ಹರಡಲು ಸಹಕಾರಿಯಾಗಿದ್ದಾರೆ.