ಇಮ್ಮಡಿ ಪುಲಿಕೇಶಿ ದಕ್ಷಿಣ ಹಾಗೂ ಮಧ್ಯ ಭಾರತದ ಎಲ್ಲಾ ರಾಜ ಮಹಾರಾಜರುಗಳನ್ನು ಸೋಲಿಸಿದ ತರುವಾಯು ಆತನ ಪ್ರತಿಷ್ಠೆ ಭಾರತ ಉಪಖಂಡದಾದ್ಯಂತ ಪಸರಿಸುವಂತಾಗುತ್ತದೆ. ಯಾವಾಗ ಉತ್ತರಾಪಥೇಶ್ವರ ಹರ್ಷವರ್ಧನನನ್ನು ಸೋಲಿಸಿದನೋ ಅನಂತರ ಆತನ ಕೀರ್ತಿ ಭಾರತ ಉಪಖಂಡದ ಸೀಮಾ ರೇಖೆಯನ್ನೂ ದಾಟಿ ಇನ್ನಿತರ ಸಾಮ್ರಾಜ್ಯಗಳ ದೃಷ್ಟಿಗೆ ಬೀಳುತ್ತದೆ. ಅದರಲ್ಲಿ ಪ್ರಮುಖವಾದದ್ದು ಇಂದಿನ ಇರಾಕ್, ಇರಾನ್ ಗಳನ್ನು ಒಳಗೊಂಡಿದ್ದ ಪರ್ಷಿಯನ್ ಸಾಮ್ರಾಜ್ಯವಾದ ಸಸಾನಿಯನ್ ಸಾಮ್ರಾಜ್ಯ. ಈ ಸಸಾನಿಯನ್ ಸಾಮ್ರಾಜ್ಯದ ಮೇಲೆ ಪಶ್ಚಿಮದಿಂದ ರೋಮ್ ನ ಬೈಜಾಂಟಿನ್ ಸಾಮ್ರಾಜ್ಯ ಹಾಗೂ ದಕ್ಷಿಣದಿಂದ ಅರಬ್ಬರು ನಿರಂತರ ದಾಳಿಗಳನ್ನು ಮಾಡುತ್ತಿದ್ದ ಕಾರಣ ಆ ಸಾಮ್ರಾಜ್ಯ ತನ್ನ ವರ್ಚಸ್ಸನ್ನು ಕಳೆದುಕೊಳ್ಳುವತ್ತ ಸಾಗಿರುತ್ತದೆ. ಈ ಸಾಮ್ರಾಜ್ಯದ ಕೊನೆಯ ಸಾಮ್ರಾಟ ಎರಡನೇ ಖುಸ್ರೋ ಬೈಜಾಂಟಿನ್ ಹಾಗೂ ಹರ್ಷನೊಂದಿಗೂ ಗಡಿ ಹಂಚಿಕೊಂಡಿದ್ದ ಕಾರಣ ಹರ್ಷನು ಚಾಲುಕ್ಯರಿಗೆ ಸೋತುಹೋದದ್ದನ್ನು ತಿಳಿದುಕೊಂಡು ಇಮ್ಮಡಿ ಪುಲಿಕೇಶಿಯ ಸ್ನೇಹ ಬೆಳೆಸುತ್ತಾನೆ. ತನ್ನ ಗೆಳೆತನದ ದ್ಯೋತಕವಾಗಿ ರಾಜ ಪ್ರತಿನಿಧಿಗಳನ್ನು ಪುಲಿಕೇಶಿಯೊಂದಿಗೆ ಕ್ರಿಸ್ತಶಕ ೬೨೫ರಲ್ಲಿ ಹಂಚಿಕೊಂಡ ಖುಸ್ರೋ ಅಪಾರ ಪ್ರಮಾಣದ ಬೆಲೆಬಾಳುವ ಉಡುಗೊರೆಗಳನ್ನು ಕೊಟ್ಟು ಕಳುಹಿಸಿದ್ದನಂತೆ. ಬೈಜಾಂಟಿನ್ ಹಾಗು ಅರಬ್ಬರ ದಾಳಿಯನ್ನು ಸತತವಾಗಿ ಎದುರಿಸುತ್ತಿದ್ದ ಖುಸ್ರೋ ಆಪತ್ಕಾಲದಲ್ಲಿ ಪುಲಿಕೇಶಿ ತನ್ನ ಸಹಾಯಕ್ಕೆ ನಿಲ್ಲಬಹುದು ಎಂಬ ಅಭಿಲಾಷೆಯಿಂದ ಇಮ್ಮಡಿ ಪುಲಿಕೇಶಿಯೆಡೆಗೆ ಸ್ನೇಹ ಹಸ್ತ ಚಾಚಿದ್ದ. ಈ ಖುಸ್ರೋ ತನ್ನ ರಾಜಪ್ರತಿನಿಧಿಗಳನ್ನ ಚಾಲುಕ್ಯ ಸಾಮ್ರಾಜ್ಯಕ್ಕೆ ಕಳುಹಿಸಿದ್ದ ಘಟನೆಯನ್ನು ಚಿತ್ರಿಸಿರುವ ವರ್ಣಚಿತ್ರ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಅಜಂತಾ ಗುಹಾಂತರ ದೇವಾಲಯದಲ್ಲಿರುವುದು ಇಂದು ನಮಗೆ ಪುಲಿಕೇಶಿಯ ಕುರಿತಾಗಿ ಸಿಗುವ ಒಂದು ಪ್ರಬಲ ಪುರಾವೆ. ಸಸಾನಿಯನ್ ಸಾಮ್ರಾಜ್ಯಕ್ಕೆ ಪಶ್ಚಿಮದಿಂದ ನಿರಂತರ ದಾಳಿ ಮಾಡಿ ತಲೆನೋವಾಗಿ ಪರಿಣಮಿಸಿದ್ದ ಅರಬ್ಬರು ಭಾರತದತ್ತಲೂ ತಮ್ಮ ದೃಷ್ಟಿ ಬೀರುತ್ತಾರೆ. ಭಾರತವನ್ನು ಅತಿಕ್ರಮಿಸುವ ಪ್ರಯತ್ನವಾಗಿ ಭಾರತದ ಪಶ್ಚಿಮ ಕರಾವಳಿಯ ಇಂದಿನ ಮಹಾರಾಷ್ಟ್ರ ಪ್ರಾಂತ್ಯದಲ್ಲಿ ದಾಳಿ ಮಾಡುತ್ತಾರೆ. ಆ ದಾಳಿಗೆ ಸಮರ್ಥವಾದ ಪ್ರತಿರೋಧವೊಡ್ಡಿ ಅವರನ್ನು ಹಿಂದೆ ಅಟ್ಟಿದ್ದು ಇಮ್ಮಡಿ ಪುಲಿಕೇಶಿಯೇ. ಹೀಗಾಗಿ ಭಾರತದ ಮೇಲೆ ಆದ ಮೊದಲ ಅರಬ್ ಅತಿಕ್ರಮಣಕಾರರನ್ನು ಹಿಮ್ಮೆಟ್ಟಿಸಿದ ಕೀರ್ತಿ ಇಮ್ಮಡಿ ಪುಲಿಕೇಶಿಗೆ ಸಲ್ಲುತ್ತದೆ. ಮುಂದೆ ಸ್ತಶಕ ೬೨೮ರ ಸುಮಾರಿಗೆ ಎರಡನೇ ಖುಸ್ರೋನ ಹತ್ಯೆಯಾಗಿ ಸಸಾನಿಯನ್ ಸಾಮ್ರಾಜ್ಯ ಅರಬ್ಬರ ಪಾಲಾಗುತ್ತದೆ. ಅಷ್ಟರಲ್ಲಿ ಅರಬ್ ಸಿಂಹಾಸನವನ್ನೇರಿದ್ದ ಮಹಮ್ಮದ್ ಪೈಗಂಬರರ ಅನುಯಾಯಿಯಾದ ಎರಡನೆಯ ಖಲೀಫ ಉಮರ್ ಭಾರತದ ಶ್ರೀಮಂತಿಕೆಗೆ ಮನಸೋತು ಹಾಗು ಧರ್ಮಪ್ರಸಾರದ ಕಾರಣ ಚಾಲುಕ್ಯ ಸಾಮ್ರಾಜ್ಯದ ಮೇಲೆ ಕ್ರಿಸ್ತಶಕ ೬೩೬ರಲ್ಲಿ ದಾಳಿ ಮಾಡುತ್ತಾನೆ. ಮೊದಲೇ ಎರಡನೇ ಖುಸ್ರೋ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನು ಹೊಂದಿದ್ದ ಪುಲಿಕೇಶಿಗೆ ಖುಸ್ರೋ ಕಾಲದಲ್ಲಿ ಆತನ ರಾಜ ಪರಿವಾರದಲ್ಲಿದ್ದ ಯಾರಿಂದಲೋ ಈ ದಾಳಿಯ ಮಾಹಿತಿ ತಿಳಿದು ಬಂದಿರಬಹುದು. ಹೀಗಾಗಿ ತನ್ನ ಸೈನ್ಯವನ್ನು ಸಂಘಟಿಸಿದ ಪುಲಿಕೇಶಿಯ ಕರ್ಣಾಟಬಲ ಸೈನ್ಯಕ್ಕೂ ಉಮರ್ ನ ಸೈನ್ಯಕ್ಕೂ ಇವತ್ತಿನ ಮಹಾರಾಷ್ಟ್ರದ ಥಾಣೆ ಬಂದರಿನಲ್ಲಿ ಘನ ಘೋರ ಯುದ್ಧ ನಡೆಯಿತು. ಅರಬ್ಬರ ಹೆಡೆಮುರಿ ಕಟ್ಟಿ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಕ್ಕೆ ಅಟ್ಟಲು ಪುಲಿಕೇಶಿಯ ಕರ್ಣಾಟಬಲ ಸೈನ್ಯ ಸಫಲವಾಗುತ್ತದೆ. ಈ ಸೋಲಿನಿಂದ ಕಂಗೆಟ್ಟ ಅರಬ್ ನ ಸೈನಿಕರು ಖಲೀಫರಿಗೆ ಸುದ್ದಿ ಮುಟ್ಟಿಸಿ ಮುಂದೆ ಚಾಲುಕ್ಯ ಸಾಮ್ರಾಜ್ಯದ ಮೇಲಿನ ದಾಳಿಯ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಬಿಡುತ್ತಾರೆ. ಇನ್ನು ಪುಲಿಕೇಶಿಯ ಸಾಮ್ರಾಜ್ಯದ ಆಂತರಿಕ ವಿಚಾರ ವಿಶೇಷಗಳನ್ನು ಅಲ್ಲಿಗೆ ಭೇಟಿ ಕೊಟ್ಟಿದ್ದ ಚೀನಾ ದೇಶದ ಯಾತ್ರಿಕ ಹ್ಯುಯೆನ್-ತ್ಸಂಗ್ ಅದ್ಭುತವಾಗಿ ವಿವರಿಸಿದ್ದಾನೆ. “ಕೇಳಲು ಕಿವಿಗೆ ಇಂಪಾದ ಕನ್ನಡ ಭಾಷೆಯನ್ನು ಮಾತನಾಡುವ ಮಹಾರಾಷ್ಟ್ರದ ಜನತೆ ಎತ್ತರವಾಗಿಯೂ, ದೃಢವಾಗಿಯೂ ಇದ್ದು ಸ್ವಾಮಿನಿಷ್ಠೆ ಪರಿಪಾಲಕರು ಆಗಿದ್ದಾರೆ” ಎಂದು ಚಾಲುಕ್ಯ ಸಾಮ್ರಾಜ್ಯದ ಕನ್ನಡಿಗರ ಬಗ್ಗೆ ಆತ ಹೇಳಿದರೆ, ಇಲ್ಲಿನ ಪ್ರಭುವಾದ ಎರಡನೇ ಪುಲಿಕೇಶಿ “ಅತ್ಯಂತ ಬಲಶಾಲಿಯಾದ ಸಾಮ್ರಾಜ್ಯವನ್ನು ಕಟ್ಟಿದ ಮಹಾನ್ ಪರಾಕ್ರಮಿಯಾಗಿದ್ದಾನೆ, ಈತನ ಸೇನೆಯಲ್ಲಿ ಸಾವಿರಾರು ಆನೆಗಳಿದ್ದು ಯುದ್ಧದ ಸಂದರ್ಭಗಳಲ್ಲಿ ಅವುಗಳಿಗೆ ಹೆಂಡವನ್ನು ಕುಡಿಸಿ ಶತ್ರುಗಳ ಮೇಲೆ ಮುನ್ನುಗ್ಗಿಸುತ್ತಾರೆ. ಈ ಇಮ್ಮಡಿ ಪುಲಿಕೇಶಿ ಯುದ್ಧ ಕೌಶಲ್ಯ, ತಂತ್ರಗಾರಿಕೆಗಳಿಂದಾಗಿ ಶತ್ರುಗಳು ಭಯಭೀತರಾಗುತ್ತಿದ್ದರು, ಇವನ ಕೀರ್ತಿ ಬಹುದೂರದವರೆಗೂ ಹಬ್ಬಿತ್ತು” ಎನ್ನುವ ಮಾಹಿತಿಯನ್ನು ಕೊಟ್ಟಿದ್ದಾನೆ. ಹೀಗೆ ಚಾಲುಕ್ಯ ಸಾಮ್ರಾಜ್ಯದಲ್ಲಿ ತನ್ನ ತೋಳ್ಬಲದಿಂದ ಸ್ವಂತ ಪ್ರಭೆಯೊಂದನ್ನು ಸೃಷ್ಟಿಸಿಕೊಂಡಿದ್ದ ಇಮ್ಮಡಿ ಪುಲಿಕೇಶಿಯ ಕೊನೆಯ ದಿನಗಳು ಸಂತೋಷದಾಯಕವಾಗಿರಲಿಲ್ಲ. ಪುಲಿಕೇಶಿಯ ಮಕ್ಕಳು ಅಧಿಕಾರಕ್ಕಾಗಿ ಕಿತ್ತಾಟ ಮಾಡಲು ಆರಂಭ ಮಾಡಿದ್ದು ಪುಲಿಕೇಶಿಗೆ ನುಂಗಲಾರದ ತುತ್ತಾಗುತ್ತದೆ. ಈ ಗಲಭೆಯಲ್ಲಿ ಪುಲಿಕೇಶಿಗೆ ಅತ್ಯಂತ ಪ್ರೀತಿಪಾತ್ರನಾಗಿದ್ದ ಮಗ ಒಂದನೇ ವಿಕ್ರಮಾದಿತ್ಯ ರಾಜ್ಯವನ್ನು ತೊರೆದು ಹೊರಟು ಹೋಗುತ್ತಾನೆ, ಇದು ಪುಲಿಕೇಶಿಯನ್ನು ಮತ್ತಷ್ಟು ಚಿಂತೆಗೀಡಾಗುವಂತೆ ಮಾಡುತ್ತದೆ. ಅಧಿಕಾರದಾಸೆಯಿಂದ ಮತಿಗೆಟ್ಟ ಪುಲಿಕೇಶಿಯ ಇನ್ನಿಬ್ಬರು ಮಕ್ಕಳು ಚಾಲುಕ್ಯರ ಕಡು ವೈರಿಗಳಾಗಿದ್ದ ಪಲ್ಲವರ ಸಖ್ಯ ಬೆಳೆಸುತ್ತಾರೆ. ಇಂತಹ ಸಂದರ್ಭಕ್ಕೇ ಎದುರು ನೋಡುತ್ತಿದ್ದ ಪಲ್ಲವರು ಪುಲಿಕೇಶಿಯ ಮಕ್ಕಳ ಸಹಾಯದಿಂದಲೇ ಬಾದಾಮಿಯ ಮೇಲೆ ಕ್ರಿಸ್ತಶಕ ೬೪೨ರಲ್ಲಿ ದಾಳಿ ಮಾಡುತ್ತಾರೆ. ಅಷ್ಟರಲ್ಲಾಗಲೇ ಚಿಂತೆಯಿಂದ ಸೊರಗಿದ್ದ ಪುಲಿಕೇಶಿ ಅನಾರೋಗ್ಯದ ನಡುವೆಯೂ ತನ್ನ ಮಕ್ಕಳ ನೆರವಿಲ್ಲದೆ ಒಬ್ಬಂಟಿಯಾಗಿ ಹೋರಾಡಿ ಬಾದಾಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಶತಾಯ ಗತಾಯ ಪ್ರಯತ್ನ ಮಾಡುತ್ತಾನೆ, ಆದರೆ ದಾಳಿಯನ್ನು ಹಿಮ್ಮೆಟ್ಟಿಸಲು ಹೋರಾಡುತ್ತಾ ಪುಲಿಕೇಶಿ ವೀರಸ್ವರ್ಗವನ್ನು ಹೊಂದುತ್ತಾನೆ. ಅಲ್ಲಿಗೆ ಚಾಲುಕ್ಯರ ಇತಿಹಾಸದಲ್ಲಿ ರಣವಿಕ್ರಮ, ಸತ್ಯಾಶ್ರಯ, ಪರಮೇಶ್ವರ, ದಕ್ಷಿಣಾಪಥೇಶ್ವರನೆಂದು ಗುರುತಿಸಿಕೊಂಡಿದ್ದ ಇಮ್ಮಡಿ ಪುಲಿಕೇಶಿಯ ದಾರುಣ ಅಂತ್ಯವಾಗಿತ್ತು, ಆ ಮೂಲಕ ಕರ್ನಾಟಕ ಇತಿಹಾಸದಲ್ಲಿ ಧ್ರುವತಾರೆಯೊಂದು ಕಳಚಿ ಬಿದ್ದಂತಾಗಿತ್ತು.
ಇಮ್ಮಡಿ ಪುಲಿಕೇಶಿಯ ಅಂತಾರಾಷ್ಟ್ರೀಯ ಸಂಬಂಧಗಳು
14
ಹಿಂದಿನ ಪೋಸ್ಟ್