ಸುಂದರ ಸಮುದ್ರ ತೀರಗಳಿಂದಲೂ, ನಿತ್ಯ ಹರಿದ್ವರ್ಣದ ಕಾಡುಗಳಿಂದಲೂ, ವರ್ಷಪೂರ್ತಿ ಮೈದುಂಬಿ ಹರಿಯುವ ನದಿಗಳಿಂದಲೂ, ರುದ್ರ ರಮಣೀಯ ಪ್ರಾಕೃತಿಕ ಸ್ಥಳಗಳಿಂದಲೂ, ಶಿಲ್ಪ ಕಲೆಗಳ ಚಾತುರ್ಯದಿಂದಲೂ, ಅನೇಕ ಬಗೆಯ ಭಾಷೆಗಳಿಂದಲೂ, ಹತ್ತು ಹಲವು ಆಚರಣೆಗಳಿಂದಲೂ, ಅನೇಕ ಸಂಸ್ಕೃತಿಗಳಿಂದಲೂ ಶ್ರೀಮಂತವಾಗಿರುವ ಈ ನಮ್ಮ ಕನ್ನಡ ನಾಡಿನ ಇತಿಹಾಸ ನಿಜಕ್ಕೂ ರೋಮಾಂಚನ ಉಂಟುಮಾಡುವಂತಹದ್ದು. ಕರ್ನಾಟಕ ಆ ಐತಿಹಾಸಿಕ ಹಿನ್ನೆಲೆಯನ್ನ ತಿಳಿದುಕೊಂಡು ಕನ್ನಡಕ್ಕೆ ಸುಭದ್ರ ಭವಿಷ್ಯತ್ತಿನ ನಿರ್ಮಾಣಕ್ಕೆ ಮುಂದಾಗಬೇಕಾದ್ದು ಈಗಿನ ಕನ್ನಡ ಮಕ್ಕಳ ಕರ್ತವ್ಯ ಹಾಗು ಜವಾಬ್ದಾರಿ ಕೂಡ. ಕನ್ನಡ ನಾಡು, ಕರ್ನಾಟಕ, ಕುಂತಲ ದೇಶ, ಎಂದೆಲ್ಲಾ ಕರೆಸಿಕೊಳ್ಳುವ ನಮ್ಮ ನಾಡು ರಾಮಾಯಣ ಕಾಲದಿಂದ ಇಂದಿನವರೆಗೂ ತನ್ನ ಪ್ರಾಚೀನತೆಯನ್ನು ಕಾಪಾಡಿಕೊಂಡು ಬಂದಿದೆ. ರಾಮಾಯಣದಲ್ಲಿ ದಂಡಕಾರಣ್ಯ ಎಂದು ಕರೆಯಲಪಡುವುದು ನಮ್ಮ ಕರ್ನಾಟಕದ ಪ್ರಾಂತ್ಯವನ್ನೇ. ಇಷ್ಟಲ್ಲದೆ ಶ್ರೀರಾಮ ಅಪಹರಣಕ್ಕೊಳಗಾದ ತನ್ನ ಹೆಂಡತಿಯಾದ ಸೀತೆಯನ್ನು ಹುಡುಕುತ್ತಾ ಬರುವುದು ಕರ್ನಾಟಕ ಪ್ರಾಂತ್ಯದ ಕಿಷ್ಕಿಂದೆಗೆ. ಶ್ರೀರಾಮ ಲಕ್ಷ್ಮಣರಿಗೆ ಸಹಾಯಕ್ಕೊದಗುವ ಹನುಮಂತ ರಾಮನಿಗೆ ಸಿಕ್ಕಿದ್ದು, ರಾಮನಿಗೆ ವಾಲಿ-ಸುಗ್ರೀವರ ಭೇಟಿ ಆಗಿದ್ದು, ಶ್ರೀ ರಾಮ ವಾಲಿಯನ್ನು ಕೊಂದಿದ್ದು, ಹನುಮಂತ ಜನಿಸಿದ್ದು ಇವೆಲ್ಲವೂ ಕಿಷ್ಕಿಂದೆಯಲ್ಲೇ. ರಾಮಾಯಣದಲ್ಲಿ ಇವೆಲ್ಲವೂ ಅತ್ಯಂತ ಮಹತ್ವಪೂರ್ಣ ಘಟನಾವಳಿಗಳು. ಅಂದಹಾಗೆ ಈ ಕಿಷ್ಕಿಂದೆ ಈವತ್ತಿನ ಕರ್ನಾಟಕದ ಹಂಪೆ. ಅಲ್ಲಿಂದ ಹನುಮಂತನೊಡಗೂಡಿ ಶ್ರೀರಾಮ ಲಂಕೆಯ ಕಡೆ ನಡೆದಾಗ ರಾವಣನ ಮೇಲೆ ಯುದ್ಧ ಸಾರುವುದಕ್ಕಾಗಿ ಜೊತೆಗೆ ಹೊರಟ ಕಪಿ ಸೈನ್ಯ ಕೂಡ ಕಿಷ್ಕಿಂದೆಯದ್ದೇ. ಮಹಾಭಾರತದ ಕಾಲಘಟ್ಟದಲ್ಲೂ ಚಂದ್ರಹಾಸನೆಂಬ ರಾಜ ಕುಂತಳ ದೇಶವನ್ನ ಆಡಳಿತ ಮಾಡುತ್ತಿದ್ದ ಬಗ್ಗೆ ಉಲ್ಲೇಖ ದೊರೆಯುತ್ತದೆ, ಕುಂತಳ ಎನ್ನುವ ಹೆಸರೂ ಕರ್ನಾಟಕದ ಪ್ರಾಚೀನ ಹೆಸರುಗಳಲ್ಲೊಂದು. ಪಾಂಡವರಲ್ಲಿ ನಾಲ್ಕನೆಯವನಾದ ನಕುಲನು ತ್ರಿಗರ್ತರು, ಸಿವಿಯರು, ಅಮವಸ್ತರು, ಮಾಳವರು ಹಾಗು ದಾಸತ್ರರೆಂಬ ಐದು ಕರ್ನಾಟಕರನ್ನು ಸೋಲಿಸಿದ ಉಲ್ಲೇಖ ನಮಗೆ ದೊರೆಯುತ್ತದೆ. ಇವುಗಳೆಲ್ಲಾ ನಮ್ಮ ಪುರಾಣ, ಪುಣ್ಯಕಾವ್ಯಗಳಲ್ಲಿ ಸಿಗುವ ಕರ್ನಾಟಕದ ಕುರಿತಾದ ಉಲ್ಲೇಖಗಳಾದರೆ ಪಾಣಿನಿಯ ಸಂಸ್ಕೃತ ಗ್ರಂಥದಲ್ಲಿ, ಮಾರ್ಕಂಡೇಯ ಪುರಾಣದಲ್ಲಿ, ಭಾಗವತ ಪುರಾಣದಲ್ಲಿ, ವರಾಹಮಿಹಿರನ ಬೃಹತ್ ಸಂಹಿತದಲ್ಲಿ ಹಾಗು ಇನ್ನು ಮುಂತಾದ ಐತಿಹಾಸಿಕ ಗ್ರಂಥಗಳಲ್ಲಿ ಕರ್ನಾಟಕದ ಕುರಿತಾದ ಉಲ್ಲೇಖ ನಮಗೆ ಕಾಣಸಿಗುತ್ತದೆ. ಇದೆಲ್ಲದರ ಹೊರತಾಗಿ ದಕ್ಷಿಣ ಭಾರತದ ಸಾಹಿತ್ಯಗಳಲ್ಲಿ ಪ್ರಮುಖವಾಗಿ ತಮಿಳು ಸಾಹಿತ್ಯದ ವಿಶಿಷ್ಟ ಗ್ರಂಥಗಳಾದ ತೋಳ್ಕಾಪಿಯಂ ಹಾಗು ಶಿಲಪ್ಪದಿಗಾರಂ ಗಳಲ್ಲಿ ಕನ್ನಡಿಗರನ್ನು ಕರುನಾಡರು, ಕರುನಾಟರು ಎಂದು ಉಲ್ಲೇಖಿಸಲಾಗಿದೆ. ಕ್ರಿಸ್ತ ಪೂರ್ವದಲ್ಲಿ ಕರ್ನಾಟಕ ನಂದರ ಹಾಗು ಮೌರ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಮೌರ್ಯರ ಪ್ರಮುಖ ದೊರೆ ಚಂದ್ರಗುಪ್ತ ಮೌರ್ಯ ತನ್ನ ಕೊನೆಯ ದಿನಗಳನ್ನು ಕರ್ನಾಟಕದ ಶ್ರವಣಬೆಳಗೊಳದಲ್ಲಿ ಕಳೆದನೆಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ಜೈನ ಸಂಪ್ರದಾಯದಂತೆ ಸಲ್ಲೇಖನ ವ್ರತ ಕೈಗೊಂಡು ಚಂದ್ರಗುಪ್ತ ಮೌರ್ಯ ಅಲ್ಲೇ ತನ್ನ ದೇಹತ್ಯಾಗ ಮಾಡಿದುದಾಗಿ ಇತಿಹಾಸಕಾರರು ಸ್ಪಷ್ಟಪಡಿಸಿದ್ದಾರೆ. ಮುಂದೆ ಅದೇ ಚಂದ್ರಗುಪ್ತ ಮೌರ್ಯನ ಮೊಮ್ಮಗ ಅಶೋಕನ ಆಡಳಿತಕ್ಕೆ ಒಳಪಟ್ಟ ಈ ಕನ್ನಡ ನೆಲ ಆತನ ಅನೇಕ ಶಾಸನಗಳನ್ನು ಒಳಗೊಂಡಿದೆ. ಅಶೋಕನ ಶಿಲಾ ಶಾಸನಗಳು ಇಂದಿನ ರಾಯಚೂರು, ಕಲ್ಬುರ್ಗಿ ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ದೊರೆಯುತ್ತವೆ. ಕ್ರಿಸ್ತಶಕದ ಆರಂಭದಲ್ಲಿ ಶಾತವಾಹನರು, ಚುಟುಗಳು ಮೊದಲ ಕೆಲವು ಶತಮಾನಗಳನ್ನು ಆಳ್ವಿಕೆ ಮಾಡುತ್ತಾರೆ. ಇವರ ನಂತರ ನಾಲ್ಕನೇ ಶತಮಾನದ ಪೂರ್ವಾರ್ಧದಲ್ಲಿ ಪ್ರವರ್ಧಮಾನಕ್ಕೆ ಬಂದು ಕನ್ನಡವನ್ನು ಅಧೀಕೃತ ಭಾಷೆಯನ್ನಾಗಿ ಮಾಡಿಕೊಂಡು, ಕನ್ನಡದ ಭವ್ಯ ಇತಿಹಾಸಕ್ಕೆ ನಾಂದಿ ಹಾಡಿದ್ದು ಕದಂಬರು ಹಾಗು ಗಂಗರು. ಕದಂಬರ ದೊರೆ ವಿಷ್ಣುಶರ್ಮ ಬರೆಸಿರುವ ಬೀರೂರಿನ ಶಾಸನದಲ್ಲಿ ಆತ ತನ್ನನ್ನು ತಾನು ‘ಸಮಗ್ರ ಕರ್ನಾಟಕ ಭೂವರ್ಗ ಭರ್ತಾರ’ ಎಂದು ಕರೆದುಕೊಂಡಿರುವುದು ಕಂಡುಬರುತ್ತದೆ. ಆ ಮೂಲಕ ಆತ ಕನ್ನಡಿಗನಾಗಿದ್ದುದಕ್ಕೆ ಅತ್ಯಂತ ಹೆಮ್ಮೆ ಪಟ್ಟುಕೊಳ್ಳುತ್ತಿದ್ದನೆಂದು ತಿಳಿದುಬರುತ್ತದೆ. ಹೀಗೆ ಮುಂದೆ ಸಾಗಿದರೆ ಕರ್ನಾಟಕದ ಕೀರ್ತಿ ಪ್ರತಿಷ್ಠೆಯನ್ನು ದೇಶ ವಿದೇಶಕ್ಕೂ ಹಬ್ಬಿಸಿದ ಬಾದಾಮಿ ಚಾಲುಕ್ಯರು ತಮ್ಮ ಸೇನೆಗೆ ‘ಕರ್ಣಾಟ ಬಲ’ ಎಂದು ಹೆಸರಿಟ್ಟದ್ದು ಈ ನೆಲದ ಪ್ರತಿಷ್ಠೆಯ ದ್ಯೋತಕವಲ್ಲದೆ ಮತ್ತಿನ್ನೇನು ಅಲ್ಲ. ಚಾಲುಕ್ಯರ ರಾಣಿ ವಿಜಯಾಂಕ ತನ್ನನ್ನು ತಾನು ‘ಕರ್ನಾಟಕ ರಾಜಪ್ರಿಯ’ಳೆಂದು ಕರೆದುಕೊಂಡಿರುವುದು ನಮ್ಮ ಹೆಣ್ಣು ಮಕ್ಕಳು ನಾಡು ನುಡಿಯ ವಿಚಾರದಲ್ಲಿ ಇಂತಹ ಅಭಿಮಾನವನ್ನು ಹೊಂದಿದ್ದರು ಎಂದು ತಿಳಿಯಲು ಕೈಗನ್ನಡಿಯಾಗಿದೆ. ಕರ್ನಾಟಕದ ಇತಿಹಾಸ ಹೇಳಹೊರಟವರು ಮರೆಯಲೇ ಬಾರದ ಮತ್ತೊಂದು ರಾಜ ಮನೆತನ ‘ರಾಷ್ಟ್ರಕೂಟ’ರದ್ದು ಹಾಗು ರಾಷ್ಟ್ರಕೂಟ ಅರಸ ನೃಪತುಂಗನನ್ನು. ಒಮ್ಮೆ ತನ್ನ ರಾಜ್ಯದಲ್ಲುಂಟಾದ ಬರಗಾಲದ ಛಾಯೆಗೆ ತತ್ತರಿಸಿದ ಆತ ಈಗಿನ ಕೊಲ್ಹಾಪುರದ ಲಕ್ಷ್ಮಿಯನ್ನು ಪ್ರಾರ್ಥಿಸಿ ತನ್ನ ಹೆಬ್ಬರಳನ್ನೇ ಹರಕೆಯಾಗಿ ಕೊಟ್ಟು ಸದಾ ತನ್ನ ಪ್ರಜೆಗಳಿಗೆ ಒಳಿತು ಬಯಸುತ್ತಾ ಬಾಳಿದ ಕನ್ನಡ ಸೀಮೆಯ ಮಹಾ ಅರಸು ಈ ನೃಪತುಂಗ. ಈತ ಬರೆಸಿದ ‘ಕವಿರಾಜ ಮಾರ್ಗ’ ನಮಗೆ ಇದುವರೆಗೂ ಕನ್ನಡದಲ್ಲಿ ಉಪಲಬ್ಧವಿರುವ ಅತ್ಯಂತ ಹಳೆಯ ಪ್ರೌಢ ಗ್ರಂಥ. ‘ಕಾವೇರಿಯಿಂದ ಗೋದಾವರಿ ವರಮಿರ್ದ ……..’ ಎಂದು ಕನ್ನಡಿಗರ ಐತಿಹಾಸಿಕ ಎಲ್ಲೆಗಳು ಎಲ್ಲೆಲ್ಲಿದ್ದವು ಎಂದು ಮೊಟ್ಟ ಮೊದಲು ಸ್ಪಷ್ಟವಾಗಿ ತಿಳಿಸಿದ ಗ್ರಂಥ ಈ ಕವಿರಾಜ ಮಾರ್ಗವೇ. ಇಂದಿನ ಇಂಡೋನೇಷ್ಯಾ, ಜಾವಾ ದ್ವೀಪವನ್ನು ಹನ್ನೊಂದನೇ ಶತಮಾನದ ಸುಮಾರಿಗೆ ಆಳುತ್ತಿದ್ದ ಶ್ರೀವಿಜಯನು ಆ ದೇಶಕ್ಕೆ ಬರುತ್ತಿದ್ದ ವ್ಯಾಪಾರಿಗಳಲ್ಲಿ ಕರ್ನಾಟಕದವರು ಇದ್ದರೆಂದು ತಿಳಿಸಿದ್ದಾನೆ. ಆ ಮೂಲಕ ಕನ್ನಡಿಗರು ಬಹು ಹಿಂದೆಯೇ ಅನ್ಯ ದೇಶಗಳೊಂದಿಗೆ ವ್ಯಾಪಾರ-ವ್ಯವಹಾರ ಹೊಂದಿದುದಕ್ಕೆ ನಮಗೆ ಪುರಾವೆ ದೊರೆಯುತ್ತದೆ. ಇನ್ನು ೧೪ ರಿಂದ ೧೭ನೆ ಶತಮಾನದವರೆಗೂ ಪ್ರವರ್ಧಮಾನದಲ್ಲಿದ್ದ, ವಿಶ್ವದ ಶ್ರೀಮಂತ ಸಾಮ್ರಾಜ್ಯ ಎಂದು ಕರೆಸಿಕೊಂಡಿದ್ದ, ಮುತ್ತು-ರತ್ನಗಳನ್ನು ರಸ್ತೆಯಲ್ಲಿ ಸುರಿದುಕೊಂಡು ಮಾರುತ್ತಿದ್ದ, ವಿಶ್ವದ ಎರಡನೇ ದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ವಿಜಯನಗರ ವನ್ನೂ ಕೂಡ ಕರ್ನಾಟಕ ಸಾಮ್ರಾಜ್ಯ ಎಂದೇ ಕರೆಯುತ್ತಿದ್ದುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಹೀಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ತನ್ನ ಎಲ್ಲೆಗಳನ್ನು ವಿಸ್ತರಿಸುತ್ತಾ, ತನ್ನ ಪ್ರಭಾವವನ್ನು ವಿಸ್ತರಿಸುತ್ತಾ ಸಾಗಿದ ಕರ್ನಾಟಕ ಸ್ವಾತಂತ್ರ್ಯೋತ್ತರದಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯಾದಾಗ ಕನ್ನಡಕ್ಕಾಗಿಯೇ ಕೊಡಲ್ಪಟ್ಟ ಮೈಸೂರು ಸಾಮ್ರಾಜ್ಯವಾಗಿ ನವೆಂಬರ್ ೧, ೧೯೫೬ರಲ್ಲಿ ಮೈದಳೆದು ನಿಂತಿತು. ಮುಂದೆ ಈ ಮಣ್ಣಿನ ನಿಜವಾದ ಹೆಸರಾದ ಕರ್ನಾಟಕ ಎಂದು ನವೆಂಬರ್ ೧, ೧೯೭೩ರಲ್ಲಿ ನಾಮಕರಣವಾಗಿ ಭಾರತದಲ್ಲಿ ಕನ್ನಡ ಅಸ್ಮಿತೆಯ ಹೆಗ್ಗುರುತಾಗಿ, ಕನ್ನಡಿಗರಿಗೆ ತವರು ಮನೆಯಾಗಿ ಕರ್ನಾಟಕ ಹೊಸ ಅವತಾರವೊಂದರಲ್ಲಿ ಅಸ್ತಿತ್ವಕ್ಕೆ ಬಂತು. ಇದು ಚಿನ್ನದ ನಾಡು, ಶ್ರೀಗಂಧದ-ಹೊನ್ನಿನ ಬೀಡು, ಶಿಲ್ಪಕಲೆಗಳ ನೆಲೆವೀಡು ಎಂದೆಲ್ಲಾ ಕರೆಸಿಕೊಳ್ಳುವ ನಮ್ಮ ಹೆಮ್ಮೆಯ ಕನ್ನಡನಾಡಿನ ಸಂಕ್ಷಿಪ್ತ ಕಥಾನಕ.
ಇದು ಕನ್ನಡ ನಾಡಿನ ಪ್ರಾಚೀನತೆ
16